ನವದೆಹಲಿ: ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪದ ಆಡಳಿತವು ಡೈರಿ ಫಾರ್ಮ್ಸ್ ಮುಚ್ಚುವ ಆದೇಶ ನೀಡಿರುವ ಮತ್ತು ಶಾಲಾ ಮಕ್ಕಳ ಮಧ್ಯಾಹ್ನ ಊಟದ ಮೆನುವಿನಿಂದ ಕೋಳಿಮಾಂಸ ಸೇರಿದಂತೆ ಮಾಂಸದ ಆಹಾರವನ್ನು ಕೈಬಿಟ್ಟಿರುವ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರ ಹಾಗೂ ಇತರರ ಪ್ರತಿಕ್ರಿಯೆ ಬಯಸಿ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ಈ ಸಂಬಂಧ ಸೋಮವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಹಾಗೂ ಎ.ಎಸ್. ಬೋಪಣ್ಣ ಅವರಿದ್ದ ಪೀಠವು, ಕೇಂದ್ರ ಸರ್ಕಾರ, ಲಕ್ಷದ್ವೀಪ ಮತ್ತು ಇತರರಿಗೆ ನೋಟಿಸ್ ನೀಡಿದೆ.
2021ರ ಮೇ 21ರಂದು ತಕ್ಷಣದಿಂದಲೇ ಜಾರಿಗೆ ಬರುವಂತೆ ಡೈರಿ ಫಾರ್ಮ್ಸ್‌ಗಳನ್ನು ಮುಚ್ಚಬೇಕು ಎಂದು ಪಶುಸಂಗೋಪನೆ ಇಲಾಖೆ ನಿರ್ದೇಶಕರಿಗೆ ಲಕ್ಷದ್ವೀಪದ ಆಡಳಿತ ಆದೇಶಿಸಿತ್ತು. ಹಸುಗಳು, ಎತ್ತು ಮತ್ತು ಕರುಗಳ ವಧೆಯನ್ನು ರದ್ದುಪಡಿಸುವ ಪ್ರಾಣಿ ಸಂರಕ್ಷಣೆ(ನಿಯಂತ್ರಣ) 2021ರ ಕಾಯ್ದೆ ಜಾರಿಗೆ ಡೈರಿ ಫಾರ್ಮ್ಸ್‌ಗಳನ್ನು ಮುಚ್ಚಿಸಲಾಗಿದೆ ಎಂದು ಆರೋಪಿಸಿ ಕವರಟ್ಟಿ ನಿವಾಸಿ ಅಜ್ಮಲ್ ಅಹ್ಮದ್ ಅವರು ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಅಹ್ಮದ್ ಅವರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ, ಲಕ್ಷದ್ವೀಪದಲ್ಲಿ ಶಾಲಾ ಮಕ್ಕಳ ಮಧ್ಯಾಹ್ನ ಊಟದ ಮೆನುವಿನಿಂದ ಮಾಂಸಾಹಾರ ಪದಾರ್ಥಗಳನ್ನು ತೆಗೆದು ಹಾಕಿರುವ ಬಗ್ಗೆ ಪ್ರಶ್ನಿಸಿದ್ದರು.