ನವದೆಹಲಿ: ಕೇರಳ ಮತ್ತು ತಮಿಳುನಾಡಿನಲ್ಲಿ ನಿಗೂಢವಾದ ಟಮೋಟೋ ಫ್ಲ್ಯೂ ಕಾಣಿಸಿಕೊಂಡಿದ್ದು . ಮಕ್ಕಳನ್ನು ಕಾಡುವ ಈ ಸೋಂಕು ಕೋವಿಡ್ ಮಾದರಿಯಲ್ಲಿ ಆತಂಕ ಸೃಷ್ಟಿಸಿದೆ.ಈವರೆಗೂ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ 82 ಪ್ರಕರಣಗಳು ವರದಿಯಾಗಿವೆ. ರಾಜ್ಯದ ದಕ್ಷಿಣ ಭಾಗವಾದ ಆರ್ಯಂಕಾವು, ಅಂಚಲ್ ಮತ್ತು ನೆಡುವತ್ತೂರ್ನಲ್ಲೂ ಪ್ರಕರಣಗಳು ವರದಿಯಾಗಿವೆ.
ತಮಿಳುನಾಡು-ಕೇರಳ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದ್ದು, ಜ್ವರ, ದದ್ದುಗಳು ಮತ್ತು ಇತರ ಕಾಯಿಲೆಗಳೊಂದಿಗೆ ಕೊಯಮತ್ತೂರ್ ಪ್ರವೇಶಿಸುವವರನ್ನು ಪರೀಕ್ಷೆಗೆ ಒಳ ಪಡಿಸಲಾಗುತ್ತಿದೆ. ಅಂತರಾಜ್ಯ ಪ್ರಯಾಣದ ವಾಹನಗಳನ್ನು ಅಕಾರಿಗಳು ತಡೆದು ಪ್ರಯಾಣಿಕರನ್ನು ತಪಾಸಣೆ ನಡೆಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಇಬ್ಬರು ಹಿರಿಯ ಅಕಾರಿಗಳ ತಂಡ ಮಕ್ಕಳನ್ನು ಪರಿಶೀಲನೆ ನಡೆಸುತ್ತಿದೆ.
ಕೇರಳದಲ್ಲಿ ಇತ್ತೀಚೆಗೆ ವಿಷಾಹಾರ ಸೇವನೆಯಿಂದ 58 ಮಂದಿ ತೊಂದರೆಗೆ ಒಳಗಾಗಿದ್ದರು. ಕೋವಿಡ್ ಸೋಂಕಿನ ನಡುವೆ ನಿಗೂಢವಾದ ಟೊಮೆಟೋ ಜ್ವರ ಆತಂಕ ಹೆಚ್ಚಿಸಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, 80 ಕ್ಕೂ ಹೆಚ್ಚು ಮಕ್ಕಳು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.
ಸಾಂಕ್ರಾಮಿಕವಾದ ಟೊಮೆಟೋ ಜ್ವರ ಕೆಂಪು ಬಣ್ಣದ ದದ್ದುಗಳು, ಚರ್ಮದ ಕಿರಿಕಿರಿ ಮತ್ತು ನಿರ್ಜಲೀಕರಣದ ರೋಗ ಲಕ್ಷಣಗಳನ್ನು ಹೊಂದಿವೆ. ಐದು ವರ್ಷದೊಳಗಿನ ಮಕ್ಕಳನ್ನು ಹೆಚ್ಚಾಗಿ ಬಾಸುತ್ತಿದೆ. ಆ ಗುಳ್ಳೆಗಳು ಹೊಡೆದರೆ ಮತ್ತೊಬ್ಬರಿಗೆ ಸೋಂಕು ಹರಡಲಿದೆ ಎಂದು ಹೇಳಲಾಗಿದೆ. ಗುಳ್ಳೆಗಳು ಟೊಮೊಟೋ ಗಾತ್ರದಲ್ಲಿ, ಕೆಂಪುಬಣ್ಣ ಹೊಂದಿರುವುದರಿಂದ ಟೊಮೊಟೋ ಜ್ವರ ಎಂದು ಗುರುತಿಸಲಾಗಿದೆ.
ಚಿಕೂನ್ಗುನ್ಯಾ ಮಾದರಿಯಲ್ಲೇ ಈ ಕಾಯಿಲೆಯೂ ಅಕ ಜ್ವರ, ದೇಹದ ನೋವು, ಕೀಲು ಊತ ಮತ್ತು ಆಯಾಸವನ್ನು ಹೊಂದಿದೆ ಎಂದು ವೈದ್ಯಕೀಯ ಅಕಾರಿಗಳು ತಿಳಿಸಿದ್ದಾರೆ. ಶಾಲೆಗಳು ಮತ್ತು ಅಂಗನವಾಡಿಗಳಲ್ಲಿ ಮಕ್ಕಳನ್ನು ತಪಾಸಣೆ ನಡೆಸಲಾಗುತ್ತಿದೆ. ಈ ಜ್ವರ ಕಾಣಿಸಿಕೊಂಡಾಗ ಮಕ್ಕಳನ್ನು ವಿಶ್ರಾಂತಿಯಲ್ಲಿರಿಸಬೇಕು ಮತ್ತು ಗುಳ್ಳೆಗಳನ್ನು ಕೆರೆಯದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.