ಗುವಹಾಟಿ: ಅಸ್ಸಾಂನ ಫಾರಿನರ್ಸ್ ಟ್ರಿಬ್ಯುನಲ್‍ನ ಸದಸ್ಯರೊಬ್ಬರು ರಾಜ್ಯದ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಕೊ-ಆರ್ಡಿನೇಟರ್ ಹಿತೇಶ್ ದೇವ್ ಶರ್ಮ ಅವರಿಗೆ ಪತ್ರ ಬರೆದು ಪ್ರಶ್ನಾರ್ಹ ಪೌರತ್ವ ವಿಚಾರಗಳ ಕುರಿತು ನಿರ್ಧಾರ ಕೈಗೊಳ್ಳಲು ರಚಿಸಲಾದ ಅರೆ-ನ್ಯಾಯಾಂಗ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಹಸ್ತಕ್ಷೇಪ ನಡೆಸದಂತೆ ಸೂಚಿಸಿದ್ದಾರೆ.
ರಾಜ್ಯದಲ್ಲಿ 2019ರಲ್ಲಿ ಬಿಡುಗಡೆಗೊಂಡ ಕರಡು ಎನ್‍ಆರ್‍ಸಿ ಮತ್ತದರ ಪೂರಕ ಪಟ್ಟಿಯನ್ನು ಪ್ರಕರಣಗಳ ವಿಲೇವಾರಿಗೆ ವಿಶ್ವಾಸಾರ್ಹ ಸಾಕ್ಷ್ಯವೆಂದು ಪರಿಗಣಿಸದಂತೆ ಶರ್ಮ ಅವರು ಟ್ರಿಬ್ಯುನಲ್ ಸದಸ್ಯರಿಗೆ ಪತ್ರ ಬರೆದ ನಂತರದ ಬೆಳವಣಿಗೆ ಇದಾಗಿದೆ.
"ಪೌರತ್ವ ನೋಂದಣಿಯ ರಿಜಿಸ್ಟ್ರಾರ್ ಜನರಲ್ ಅವರು ಎನ್‍ಆರ್‍ಸಿ ಅನ್ನು ಅಂತಿಮವೆಂದು ಘೋಷಿಸದೇ ಇರುವುದರಿಂದ ಹಾಗೂ ಅದರಲ್ಲಿ ದೋಷಗಳಿರುವುದರಿಂದ ಅಂತಿಮ ಎನ್‍ಆರ್‍ಸಿ ಪ್ರಕಟಗೊಂಡಾಗ ಬದಲಾವಣೆಗಳಿರಬಹುದು, ಆದುದರಿಂದ ಅಂತಿಮ ಎನ್‍ಆರ್‍ಸಿ ಪ್ರಕಟಗೊಳ್ಳುವ ತನಕ ಎನ್‍ಆರ್‍ಸಿ ಕರಡು ಮತ್ತು ಪೂರಕ ಪಟ್ಟಿಯನ್ನು ಅವಲಂಬಿಸದಂತೆ ಮನವಿ" ಎಂದು ಎಪ್ರಿಲ್ 18ರಂದು ಬರೆದ ಪತ್ರದಲ್ಲಿ ಶರ್ಮ ಹೇಳಿದ್ದರು.
ಮೇ 10 ರಂದು ಟ್ರಿಬ್ಯುಬಲ್ ಸದಸ್ಯರೊಬ್ಬರು ಶರ್ಮ ಅವರ ಪತ್ರಕ್ಕೆ ಪ್ರತಿಕ್ರಿಯಿಸಿ "ಎನ್‍ಆರ್‍ಸಿ ಅಂತಿಮವಾಗಿದೆ ಹಾಗೂ ಸುಪ್ರೀಂ ಕೋರ್ಟ್ ಮತ್ತು ನಾಗರಿಕರ ನೋಂದಣಿ ರಿಜಿಸ್ಟ್ರಾರ್ ಜನರಲ್ ನಿಯಮಾವಳಿಗಳಂತೆ ಘೋಷಿಸಲಾಗಿದೆ. ಎನ್‍ಆರ್‍ಸಿ ಇದರ ಅಂತಿಮ ಪ್ರಕಟಣೆಯ ದಿನಾಂಕ 31-08-2019ರಂದು ಆಗಿನ ಅಸ್ಸಾಂ ಎನ್‍ಆರ್‍ಸಿ ಕೊ-ಆರ್ಡಿನೇಟರ್, ನಿಮಗಿಂತ ಮುಂಚೆ ಈ ಹುದ್ದೆಯಲ್ಲಿದ್ದ ಪ್ರತೀಕ್ ಹಜೇಲಾ ಅವರು ಸುತ್ತೋಲೆ ಹೊರಡಿಸಿ ಪ್ರಕಟಿಸಲಾದ ಎನ್‍ಆರ್‍ಸಿ ಅಂತಿಮ ಎಂದಿದ್ದರು" ಎಂದು ಹೇಳಿದ್ದರು.
"ಎನ್‍ಆರ್‍ಸಿ ಅಂತಿಮವಲ್ಲ ಎಂದು ಶರ್ಮ ಹೇಳಿರುವುದು ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ" ಎಂದು ಕೂಡ ಫಾರಿನರ್ಸ್ ಟ್ರಿಬ್ಯುನಲ್ ಸದಸ್ಯ ಹೇಳಿದ್ದಾರೆ.
ಆದರೆ ಫಾರಿನರ್ಸ್ ಟ್ರಿಬ್ಯುನಲ್ ಸದಸ್ಯರು ಬರೆದ ಪತ್ರ ತಮಗೆ ದೊರಕಿಲ್ಲ ಎಂದು ಶರ್ಮ ಹೇಳಿಕೊಂಡಿದ್ದಾರೆ.