ಬಾರಾಮುಲ್ಲಾ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮೂವರು ಲಷ್ಕರ್-ಎ-ತೊಯ್ಬಾ(ಎಲ್‌ಇಟಿ) ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದು, ಅವರಿಂದ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ಬಾರಾಮುಲ್ಲಾದ ಪಟ್ಟನ್ ನಲ್ಲಿ ಸರಪಂಚ್ ನ ಹತ್ಯೆಯಲ್ಲಿ ಬಂಧಿತ ಭಯೋತ್ಪಾದಕರು ಭಾಗಿಯಾಗಿದ್ದರು.
ಬಂಧಿತ ಉಗ್ರರರನ್ನು ಗೋಷ್ ಬುಗ್ ಪಟ್ಟಣ ನಿವಾಸಿಗಳಾದ ನೂರ್ ಮೊಹಮ್ಮದ್ ಯಾಟೂ, ಮೊಹಮ್ಮದ್ ರಫೀಕ್ ಪರ್ರೆ ಮತ್ತು ಆಶಿಕ್ ಹುಸೇನ್ ಪರ್ರೆ ಎಂದು ಗುರುತಿಸಲಾಗಿದೆ.
ಏಪ್ರಿಲ್ 15 ರಂದು ಗೋಷ್‌ಬುಗ್‌ನ ಸರಪಂಚ್ ಮಂಜೂರ್ ಅಹ್ಮದ್ ಬಂಗೂ ಅವರ ಹತ್ಯೆ ಪ್ರಕರಣದ ಸಂಬಂಧ ಈ ಮೂವರು ಉಗ್ರರನ್ನು ಬಂಧನಕ್ಕೊಳಪಡಿಸಲಾಗಿದೆ. ಉಗ್ರಗಾಮಿ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಎಸ್‌ಎಸ್‌ಪಿ ಬಾರಾಮುಲ್ಲಾ ರಯೀಸ್ ಅಹ್ಮದ್ ಭಟ್ ಹೇಳಿದ್ದಾರೆ.
ಬಂಧಿತ ಭಯೋತ್ಪಾದಕರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಲಷ್ಕರ್-ಎ-ತೊಯ್ಬಾದ ಭೂಗತ ಪಾತಕಿ ಮೊಹಮ್ಮದ್ ಅಫ್ಜಲ್ ಲೋನ್ ಜೊತೆ ಸಂಪರ್ಕದಲ್ಲಿದ್ದರು ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ.