ಕೀವ್: ವರ್ಷಾಂತ್ಯದ ವೇಳೆಗೆ ರಷ್ಯಾ ವಿರುದ್ಧ ಉಕ್ರೇನ್ ಗೆ ಗೆಲುವು ಸಾಧಿಸಲಿದೆ ಎಂದು ಗುಪ್ತಚರ ಇಲಾಖೆ ಮುಖ್ಯಸ್ಥರೊಬ್ಬರು ಹೇಳಿದ್ದಾರೆ.
ಉಕ್ರೇನ್ ನ ಮಿಲಿಟರಿ ಗುಪ್ತಚರ ಮುಖ್ಯಸ್ಥರಾದ 36 ವರ್ಷದ ಮೇಜರ್ ಜನರಲ್ ಕೈರಿಲೋ ಬುಡಾನೋವ್ ಅವರು ಈ ಕುರಿತು ಬ್ರಿಟನ್ ನ ಸ್ಕೈ ನ್ಯೂಸ್‌ಗೆ ಮಾಹಿತಿ ನೀಡಿದ್ದು, 'ಉಕ್ರೇನ್‌ನಲ್ಲಿನ ರಷ್ಯಾ ವಿರುದ್ಧದ ಯುದ್ಧವು ಆಗಸ್ಟ್‌ನಲ್ಲಿ "ಬ್ರೇಕಿಂಗ್ ಪಾಯಿಂಟ್" ಅನ್ನು ತಲುಪಬಹುದಾಗಿದ್ದು, ವರ್ಷಾಂತ್ಯದ ವೇಳೆಗೆ ರಷ್ಯಾಗೆ ಸೋಲಿನ ರುಚಿ ತೋರಿಸಲಿದ್ದೇವೆ ಎಂದು ಹೇಳಿದ್ದಾರೆ.
ರಷ್ಯಾ ವಿರುದ್ಧದ ಯುದ್ಧದಲ್ಲಿ ನಾವು ಆರಂಭದಿಂದಲೂ ಆಶಾವಾದಿಗಳಾಗಿದ್ದು, ಆಗಸ್ಟ್ ತಿಂಗಳ 2ನೇ ವಾರದಲ್ಲಿ ಯುದ್ಧ ಬ್ರೇಕಿಂಗ್ ಪಾಯಿಂಟ್ ತಲುಪಬಹುದು. ಹೆಚ್ಚಿನ ಸಕ್ರಿಯ ಯುದ್ಧ ಕ್ರಮಗಳು ಈ ವರ್ಷದ ಅಂತ್ಯದ ವೇಳೆಗೆ ಮುಕ್ತಾಯಗೊಳ್ಳುತ್ತವೆ. ಇದರ ಪರಿಣಾಮವಾಗಿ, ಡೊನ್ಬಾಸ್ ಮತ್ತು ಕ್ರೈಮಿಯಾ ಸೇರಿದಂತೆ ನಾವು ಕಳೆದುಕೊಂಡಿರುವ ನಮ್ಮ ಎಲ್ಲಾ ಪ್ರದೇಶಗಳಲ್ಲಿ ನಾವು ರಷ್ಯನ್ ಪಡೆಗಳನ್ನು ಹಿಮ್ಮೆಟ್ಟಿಸಿ, ಉಕ್ರೇನಿಯನ್ ಶಕ್ತಿಯನ್ನು ನವೀಕರಿಸುತ್ತೇವೆ" ಎಂದು ಹೇಳಿದರು.
ಪೂರ್ವ ಉಕ್ರೇನ್‌ನ ಡೊನ್‌ಬಾಸ್ ಪ್ರದೇಶದಲ್ಲಿ ಪ್ರಸ್ತುತ ತೀವ್ರ ಹೋರಾಟ ನಡೆಯುತ್ತಿದೆ, ಅಲ್ಲಿ ರಷ್ಯಾ ಇತ್ತೀಚೆಗೆ ಗಮನಾರ್ಹ ಪ್ರಗತಿಯನ್ನು ಸಾಧಿಸದೆ ತನ್ನ ಪಡೆಗಳನ್ನು ಕೇಂದ್ರೀಕರಿಸುತ್ತಿದೆ. ಉಕ್ರೇನ್ "ನಮ್ಮ ಶತ್ರುಗಳ ಬಗ್ಗೆ ಎಲ್ಲವನ್ನೂ ತಿಳಿದಿದೆ. ಅವರ ಯೋಜನೆಗಳು ನಮಗೆ ತಿಳಿದಿದೆ. ರಷ್ಯಾವು ಇಲ್ಲಿಯವರೆಗೆ ಕೇವಲ ಒಂದು ಅಂದರೆ ಪ್ರಮುಖ ನಗರವಾದ ಖೆರ್ಸನ್‌ನ ಸಂಪೂರ್ಣ ನಿಯಂತ್ರಣವನ್ನು ಪಡೆಯಲು ಸಮರ್ಥವಾಗಿದೆ. ಆದರೆ ಮುಂದಿನ ದಿನಗಳಲ್ಲಿ ವ್ಯಾಪಕ ಹಿನ್ನಡೆಯನ್ನುಭವಿಸಲಿದೆ ಎಂದು ಹೇಳಿದ್ದಾರೆ.
ಉಕ್ರೇನ್ ಯುದ್ಧದಿಂದಾಗಿ ರಷ್ಯಾದಲ್ಲಿ ಆಂತರಿಕ ಕಲಹ ಆರಂಭವಾಗಿದೆ. ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಪದಚ್ಯುತಗೊಳಿಸಲು ಮಾಸ್ಕೋದಲ್ಲಿ ಈಗಾಗಲೇ ದಂಗೆ ನಡೆಯುತ್ತಿದೆ ಮತ್ತು ರಷ್ಯಾದ ನಾಯಕ ಪುಟಿನ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂದು ಉಕ್ರೇನ್ ಗುಪ್ತಚರ ಮುಖ್ಯಸ್ಥರು ಪರಿಶೀಲಿಸದ ಮಾಹಿತಿ ನೀಡಿದರು. ಆದರೆ ಈ ವರದಿಯನ್ನು ಈ ಹಿಂದೆ ರಷ್ಯಾ ಸರ್ಕಾರ ತಳ್ಳಿ ಹಾಕಿತ್ತು.