ಹೈದರಾಬಾದ್: ತೆಲಂಗಾಣ ರಾಜ್ಯ ಸದರನ್ ಪವರ್ ಡಿಸ್ಟ್ರಿಬ್ಯೂಷನ್ ಕಂಪನಿ ಲಿಮಿಟೆಡ್ (ಟಿಎಸ್‌ಎಸ್‌ಪಿಡಿಸಿಎಲ್) ನ ಜೂನಿಯರ್ ಲೈನ್‌ಮೆನ್ (ಜೆಎಲ್‌ಎಂ) ಹುದ್ದೆಗೆ ನೇಮಕವಾದ ತೆಲಂಗಾಣದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಯೊಂದಿಗೆ ಬಾಬೂರಿ ಸಿರಿಶಾ ಎಂಬ ಯುವತಿ ಹೊಸ ಇತಿಹಾಸ ಬರೆದಿದ್ದಾಳೆ.
ತೆಲಂಗಾಣ ಇಂಧನ ಸಚಿವ ಜಿ.ಜಗದೀಶ್ ರೆಡ್ಡಿ ಅವರು ಬುಧವಾರ ತಮ್ಮ ಕಚೇರಿಯಲ್ಲಿ ಸಿರಿಶಾಗೆ ನೇಮಕಾತಿ ಪತ್ರ ವಿತರಿಸಿ, ಶುಭಕೋರಿದರು.
ಸಿರಿಶಾ ಅವರು ಸಿದ್ಧಿಪೇಟೆ ಜಿಲ್ಲೆಯ ನಿವಾಸಿ. ಮೇಡ್ಚಲ್-ಮಲ್ಕಜ್ಗಿರಿಯಲ್ಲಿ ಸಿರಿಶಾ ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ. ಇತ್ತೀಚೆಗಷ್ಟೇ ಟಿಎಸ್‌ಎಸ್‌ಪಿಡಿಸಿಎಲ್, ಜೂನಿಯರ್ ಲೈನ್‌ಮೆನ್ ಹುದ್ದೆಗೆ ನೇಮಕಾತಿ ನಡೆಸಿತ್ತು. ಇದರಲ್ಲಿ ಆಯ್ಕೆಯಾದ ಒಬ್ಬಳೇ ಮಹಿಳೆ ಎಂಬ ಖ್ಯಾತಿಗೆ ಸಿರಿಶಾ ಪಾತ್ರರಾಗಿದ್ದಾರೆ. ತೆಲಂಗಾಣದಲ್ಲಿರುವ ಎರಡೂ ವಿದ್ಯುತ್ ವಿತರಣಾ ಕಂಪನಿಯ ಜೆಎಲ್‌ಎಂ ಹುದ್ದೆಯಲ್ಲಿರುವ ಏಕೈಕ ಮಹಿಳೆಯಾಗಿದ್ದಾಳೆ.
'ಟಿಎಸ್ಎಸ್ಪಿಡಿಸಿಎಲ್ನಲ್ಲಿ ಜೆಎಲ್‌ಎಂ ಹುದ್ದೆಗೆ ಆಯ್ಕೆಯಾದ ಮೊದಲ ಮಹಿಳೆಯಾಗಿರುವುದು ಹೆಮ್ಮೆಯ ಕ್ಷಣವಾಗಿದೆ. ಪುರುಷರಿಗಿಂತ ಮಹಿಳೆಯರು ಯಾವುದರಲ್ಲೂ ಕಡಿಮೆಯಿಲ್ಲ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗಬಲ್ಲರು ಎಂಬುದನ್ನು ನನ್ನ ಆಯ್ಕೆಯು ಸಾಬೀತುಪಡಿಸುತ್ತದೆ. ನನಗೆ ಈ ಅವಕಾಶ ನೀಡಿದ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್, ಇಂಧನ ಸಚಿವ ಜಗದೀಶ್ ರೆಡ್ಡಿ, ಟಿಎಸ್‌ಎಸ್‌ಪಿಡಿಸಿಎಲ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ರಘುಮಾ ರೆಡ್ಡಿ ಮತ್ತು ಕಂಪನಿಗೆ ಧನ್ಯವಾದ ಅರ್ಪಿಸುತ್ತೇನೆ. ನನ್ನ ಕೆಲಸದ ಮೂಲಕ ನನ್ನ ಟಿಎಸ್ಎಸ್ಪಿಡಿಸಿಎಲ್ಗೆ ಹೆಮ್ಮೆ ತರುತ್ತೇನೆ ಎಂದು ಸಿರಿಶಾ ಹೇಳಿದರು.
ಇಂಧನ ಸಚಿವ ಜಗದೀಶ್ ರೆಡ್ಡಿ ಮಾತನಾಡಿ, ಮಹಿಳೆಯರು ಹೊಸ ಹಾದಿ ತುಳಿದು ವಿದ್ಯುತ್ ವಲಯದ ಜೆಎಲ್‌ಎಂ ಹುದ್ದೆಗೆ ನೇಮಕಗೊಳ್ಳುತ್ತಿರುವುದು ಸಂತಸದ ಕ್ಷಣವಾಗಿದೆ. ಲೈನ್‌ಮೆನ್ ಹುದ್ದೆಗಳಲ್ಲಿ ಮಹಿಳೆಯರೂ ನೇಮಕವಾಗುತ್ತಿರುವುದರಿಂದ ಈ ಹಿಂದೆ ಸೂಚಿಸಿದಂತೆ ಲೈನ್‌ಮೆನ್ ಹುದ್ದೆಯ ಹೆಸರನ್ನು ಬದಲಾಯಿಸಿ ಲಿಂಗ-ತಟಸ್ಥಗೊಳಿಸಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದರು.
ಟಿಎಸ್ಎಸ್ಪಿಡಿಸಿಎಲ್ನಲ್ಲಿ 70 ಸಹಾಯಕ ಎಂಜಿನಿಯರ್‌ಗಳು, 201 ಸಬ್ ಎಂಜಿನಿಯರ್‌ಗಳು ಮತ್ತು 1,000 ಲೈನ್‌ಮೆನ್ ಹುದ್ದೆಗಳ ನೇಮಕಾತಿ ಈಗಾಗಲೇ ಪ್ರಾರಂಭವಾಗಿದೆ. ವಿವಿಧ ಹುದ್ದೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯವನ್ನೂ ನೀಡಲಾಗುತ್ತಿದೆ ಎಂದು ಜಗದೀಶ್ ರೆಡ್ಡಿ ಹೇಳಿದರು.