ಮುಳ್ಳೇರಿಯ: ಉದ್ಯೋಗಾಕಾಂಕ್ಷಿಗಳನ್ನು ಅರಸಿ ಅವರ ಮನೆ ಮನೆಗಳಿಗೆ ಸರ್ಕಾರವೇ ತೆರಳಲಿದೆ ಎಂದು ಸ್ಥಳೀಯಾಡಳಿತ, ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಹೇಳಿದ್ದಾರೆ.
ತಾಯನ್ನೂರು ಸರ್ಕಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್‍ನ ಅಂಗವಾಗಿ ಪೂರ್ಣಗೊಂಡಿರುವ ಕಟ್ಟಡದ ಉದ್ಘಾಟನೆ, 103ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ಹಾಗೂ ನಿವೃತ್ತಿ ಹೊಂದುತ್ತಿರುವ ಶಿಕ್ಷಕರ ಬೀಳ್ಕೊಡುಗೆ ಸಭೆಯಲ್ಲಿ ಅವರು ಮಾತನಾಡಿದರು.
ಕೇರಳದಲ್ಲಿ ಸಾಕಷ್ಟು ವಿದ್ಯಾವಂತ ಯುವಕರಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಉದ್ಯೋಗಾಕಾಂಕ್ಷಿಗಳು ಸರ್ಕಾರದ ಬಳಿಗೆ ಬರುವುದಿಲ್ಲ, ಸರ್ಕಾರವು ಉದ್ಯೋಗಾಕಾಂಕ್ಷಿಗಳಹತ್ತಿರ ತೆರಳಲಿದೆ. ಇದರ ಅಂಗವಾಗಿ ಕುಟುಂಬಶ್ರೀ ಆಕ್ಸಿಲಿಯರಿ ಗ್ರೂಪ್ ನ 18 ರಿಂದ 40 ವರ್ಷ ವಯೋಮಾನದವರು ನಿಮ್ಮ ಮನೆಗಳಿಗೆ ಭೇಟಿ ನೀಡಿ 18 ರಿಂದ 59 ವರ್ಷದೊಳಗಿನವರ ಪಟ್ಟಿಯನ್ನು ಇದೇ 8ರಿಂದ ರಚಿಸಲಿದ್ದಾರೆ. ಮುಂದಿನ ನಾಲ್ಕು ವರ್ಷಗಳ ಕಾಲ ವಿಶೇಷ ತರಬೇತಿಯೊಂದಿಗೆ ಅವರಿಗೆ ಉದ್ಯೋಗ ನೀಡಲಾಗುವುದು. ಅದೇ ರೀತಿ ಸ್ಥಳೀಯಾಡಳಿತ ಸಂಸ್ಥೆಗಳನ್ನು ಕೇಂದ್ರೀಕರಿಸಿ ಒಂದು ಲಕ್ಷ ಉದ್ಯಮಗಳನ್ನು ಆರಂಭಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಈ ಮೂಲಕ ಕನಿಷ್ಠ 20 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಅಲ್ಲದೆ ಕೇರಳದಲ್ಲಿ ಜನ ಶಿಕ್ಷಣ ಚಳವಳಿ ಸಕ್ರಿಯವಾಗಿದೆ.
ಕೇರಳÀವನ್ನು ವಿಶ್ವ ದರ್ಜೆಯ ಜ್ಞಾನ ಕೇಂದ್ರವನ್ನಾಗಿ ಪರಿವರ್ತಿಸುವುದು ಸರ್ಕಾರದ ಗುರಿಯಾಗಿದೆ. ಹೈಯರ್ ಸೆಕೆಂಡರಿ ಹಂತದವರೆಗಿನ ಶಿಕ್ಷಣ ಸಂಸ್ಥೆಗಳು ಮುಂದೆ ಬಂದಿವೆ. ಸÀರ್ಕಾರ ಈಗ ಉನ್ನತ ಶಿಕ್ಷಣಕ್ಕೆ ಒತ್ತು ನೀಡಿದೆ. ಇದರ ಭಾಗವಾಗಿ ಉನ್ನತ ಶಿಕ್ಷಣ ಕ್ಷೇತ್ರಕ್ಕೆ 2546 ಕೋಟಿ ಮೀಸಲಿಡಲಾಗಿದೆ ಎಂದು ಅವರು ಹೇಳಿದರು. ಸೇವೆಯಿಂದ ನಿವೃತ್ತರಾದ ಮೆರ್ಸಿ ಟೀಚರ್ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಶಾಸಕ ಇ. ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಮುಖ್ಯ ಅತಿಥಿಯಾಗಿದ್ದರು. ಕೋಡೋಂ-ಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ಶ್ರೀಜಾ ಹಾಗೂ ಕೋಟೋಂ ಬೇಲೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪಿ. ದಾಮೋದರನ್, ಪರಪ್ಪ ಬ್ಲಾಕ್ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ರಜನೀಕೃಷ್ಣನ್, ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಕೆ.ಪುಷ್ಪಾ, ಕೋಡೋಂ ಬೆಳ್ಳೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿಯ ಶೈಲಜಾ ಪುರುಷೋತ್ತಮನ್, ಕೋಡೋ ಬೆಳ್ಳೂರು ಗ್ರಾ.ಪಂ. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಎಸ್. ಜಯಶ್ರೀ, ಪಂಚಾಯಿತಿ ಸದಸ್ಯರಾದ ರಾಜೀವನ್ ಚಿರೋಳ್, ಇ. ಬಾಲಕೃಷ್ಣನ್, ಎ ಅನಿಲ್‍ಕುಮಾರ್, ಪಿಟಿಎ ಅಧ್ಯಕ್ಷ ಬಿ ರಾಜನ್, ಮದರ್ ಪಿಟಿಎ ಅಧ್ಯಕ್ಷೆ ಯಮುನಾ ಮಧುಸೂದನನ್ ಮತ್ತು ಎಸ್‍ಎಂಸಿ ಅಧ್ಯಕ್ಷ ಪಿ.ಜೆ. ವರ್ಗೀಸ್, ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ವಿ.ಕರುಣಾಕರನ್ ನಾಯರ್, ಎಂ.ಟಿ. ಮರ್ಸಿ, ಮುಖ್ಯಶಿಕ್ಷಕ ಸೆಬಾಸ್ಟಿಯನ್ ಮ್ಯಾಥ್ಯೂ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಭಾರ ಪ್ರಾಂಶುಪಾಲೆ ಎ ಧನಲಕ್ಷ್ಮಿ ವರದಿ ಮಂಡಿಸಿದರು. ಮಕ್ಕಳ ವಿವಿಧ ಕಲಾಪ್ರದರ್ಶನ ಹಾಗೂ ಇತರೆ ಕಲಾ ಪ್ರದರ್ಶನಗಳು ನಡೆದವು.