ನವದೆಹಲಿ: ಕೇಂದ್ರ ಸರ್ಕಾರ ಬ್ರಿಟಿಷರ ಕಾಲದ ದೇಶದ್ರೋಹ ಕಾನೂನಿನ ಮರುಪರಿಶೀಲನೆ ಪೂರ್ಣಗೊಳ್ಳುವವರೆಗೆ ತಡೆಹಿಡಿಯಲಾಗಿದೆ. ಸದ್ಯಕ್ಕೆ ದೇಶದ್ರೋಹ ಆರೋಪದಡಿ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಬಾರದು ಎಂದು ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.
ಇಂದು ಸುಪ್ರೀಕೋರ್ಟ್ ದೇಶದ್ರೋಹ ಕಾನೂನಿನ ಬಳಕೆಗೆ ತಡೆ ನೀಡಿದೆ ಮತ್ತು ಕಾನೂನನ್ನು ಪರಿಶೀಲಿಸುವವರೆಗೆ ದೇಶದ್ರೋಹದ ಆರೋಪಗಳನ್ನು ಪ್ರಚೋದಿಸುವ ಯಾವುದೇ ಹೊಸ ಎಫ್‌ಐಆರ್‌ಗಳನ್ನು ದಾಖಲಿಸದಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶಿಸಿದೆ. ಬಾಕಿ ಉಳಿದಿರುವ ದೇಶದ್ರೋಹ ಪ್ರಕರಣಗಳಲ್ಲಿ, ದೇಶದ್ರೋಹದ ಆರೋಪದಡಿ ಜೈಲಿನಲ್ಲಿ ಇರುವವರು ನ್ಯಾಯಾಲಯಗಳನ್ನು ಸಂಪರ್ಕಿಸಿ ಜಾಮೀನು ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೇಶದ್ರೋಹಕ್ಕೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124 ಎ ಅಡಿಯಲ್ಲಿ ಯಾವುದೇ ಎಫ್‌ಐಆರ್ ದಾಖಲಿಸುವುದು ಮತ್ತು ಯಾವುದೇ ಪ್ರಕ್ರಿಯೆಗಳನ್ನು ನಡೆಸದಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ದೇಶದ್ರೋಹದ ಕಾನೂನು ಮರು ಪರಿಶೀಲನೆ ಪೂರ್ಣಗೊಳ್ಳುವವರೆಗೆ ಅದನ್ನು ಬಳಸಲಾಗುವುದಿಲ್ಲ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಸುಪ್ರೀಂ ಕೋರ್ಟ್‌ನ ಮೂಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠ ಹೇಳಿದೆ.
“ಈಗಾಗಲೇ ಐಪಿಸಿ ಸೆಕ್ಷನ್ 124 ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ ಕಾರಣ ಜೈಲಿನಲ್ಲಿರುವವರು ಜಾಮೀನು ಪಡೆಯಲು ನ್ಯಾಯಾಲಯಗಳನ್ನು ಸಂಪರ್ಕಿಸಬಹುದು” ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
“ಸೆಕ್ಷನ್ 124ಎ ಯ ಕಠಿಣತೆಗಳು ಪ್ರಸ್ತುತ ಪರಿಸ್ಥಿತಿಗೆ ಹೊಂದಿಕೆಯಾಗುವುದಿಲ್ಲ ಮತ್ತು ಇದು ದೇಶದ ವಸಾಹತುಶಾಹಿ ಕಾನೂನಿನಡಿಯಲ್ಲಿದ್ದ ಸಮಯಕ್ಕೆ ಉದ್ದೇಶಿಸಲಾಗಿತ್ತು ಎಂದು ಕೇಂದ್ರವು ಒಪ್ಪುತ್ತದೆ ಎಂಬುದು ಸ್ಪಷ್ಟವಾಗಿದೆ. ಹೀಗಾಗಿ, ಕೇಂದ್ರವು ಅದನ್ನು ಮರುಪರಿಶೀಲಿಸಬಹುದು” ಎಂದು ಕೋರ್ಟ್ ಹೇಳಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 124ಎ ಅಡಿಯಲ್ಲಿ ದೇಶದ್ರೋಹದ ಪ್ರಕರಣಗಳನ್ನು ದಾಖಲಿಸಲಾಗುತ್ತಿತ್ತು. ಇದಕ್ಕೆ ವ್ಯಾಪಕ ವಿರೋಧವೂ ವ್ಯಕ್ತವಾಗಿತ್ತು.