ನವದೆಹಲಿ: ರಾಜ್ಯಸಭೆ ಚುನಾವಣೆಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಭಿನ್ನಮತ ಸ್ಫೋಟಗೊಂಡಿದೆ.
ನಟಿ ನಗ್ಮಾ ಹಾಗೂ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ಪವನ್ ಖೇರ್ ರಾಜ್ಯಸಭೆ ಟಿಕೆಟ್ ಆಕಾಂಕ್ಷಿಗಳಾಗಿದ್ದರು.
ಕಾಂಗ್ರೆಸ್ ಪಕ್ಷದ ನಡೆಯಿಂದ ನಗ್ಮಾ ಮತ್ತು ಪವನ್ ಖೇರ್ ಪಕ್ಷದ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ. ಇಬ್ಬರು ಸಾಮಾಜಿಕ ಜಾಲತಾಣಗಳ ಮೂಲಕ ಪಕ್ಷದ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಬಹುಶಃ ನನ್ನ ತಪಸ್ಸಿನಲ್ಲಿ ಏನೋ ಲೋಪ ಇರಬೇಕು. ಆಗಾಗಿ ಟಿಕೆಟ್ ನಿರಾಕರಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಅನ್ನು ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಶೇರ್ ಮಾಡುತ್ತಿದ್ದಾರೆ. ಪವನ್ ಖೇರ್ ಅವರಿಗೆ ಟಿಕೆಟ್ ನೀಡಬೇಕಿತ್ತು ಎಂದು ರಾಜಸ್ಥಾನ ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
2003-04ರಲ್ಲಿ ನನಗೆ ರಾಜ್ಯಸಭೆಗೆ ಟಿಕೆಟ್ ಕೊಡುವುದಾಗಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರೇ ಭರವಸೆ ನೀಡಿದ್ದರು. ಈಗ ಅವರು ಅದನ್ನು ಮರೆತಿದ್ದಾರೆ. ನಾನು ಇಮ್ರಾನ್ ಅವರಿಗಿಂತ ಕಡಿಮೆ ಅರ್ಹತೆ ಹೊಂದಿರುವುದೇ ಇದಕ್ಕೆ ಕಾರಣ ಎಂದು ನಗ್ಮಾ ಟ್ವೀಟ್ ಮಾಡಿದ್ದಾರೆ. ಮಹಾರಾಷ್ಟ್ರದಿಂದ ಕಾಂಗ್ರೆಸ್ ಪಕ್ಷ ಇಮ್ರಾನ್ ಅವರಿಗೆ ಟಿಕೆಟ್ ನೀಡಿದೆ.