ಅಲಹಾಬಾದ್: ಕಳೆದ ವರ್ಷ 26 ಜನವರಿ 2021 ರಂದು ಹೊಸದಿಲ್ಲಿಯಲ್ಲಿ ಕೃಷಿ ಕಾನೂನುಗಳ ವಿರುದ್ಧ ಆಂದೋಲನ ನಡೆಸುತ್ತಿದ್ದ ಪ್ರತಿಭಟನಾಕಾರರ ಸಾವಿನ ವರದಿಗೆ ಸಂಬಂಧಿಸಿದಂತೆ Thewire.in ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ಮತ್ತು ಪತ್ರಕರ್ತೆ ಇಸ್ಮತ್ ಅರಾ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಅನ್ನು ಅಲಹಾಬಾದ್ ಹೈಕೋರ್ಟ್ ರದ್ದುಗೊಳಿಸಿದೆ ಎಂದು TheWire ವರದಿ ಮಾಡಿದೆ.
ಮೇ 25 ರಂದು ಬಿಡುಗಡೆಯಾದ ತನ್ನ ತೀರ್ಪಿನಲ್ಲಿ, ನ್ಯಾಯಮೂರ್ತಿಗಳಾದ ಅಶ್ವನಿ ಕುಮಾರ್ ಮಿಶ್ರಾ ಮತ್ತು ರಜನೀಶ್ ಕುಮಾರ್ ಅವರ ಉಚ್ಚ ನ್ಯಾಯಾಲಯದ ಪೀಠವು, 'ದಿ ವೈರ್ ಸುದ್ದಿತಾಣವು ಸಂತ್ರಸ್ತರ ಕುಟುಂಬದ ಕುಟುಂಬದವರ ಹೇಳಿಕೆಗಳನ್ನು ಮಾತ್ರ ವರದಿ ಮಾಡಿದೆ ಮತ್ತು ಪ್ರಚೋದನೆಗೆ ಕಾರಣವಾಗುವ ಯಾವುದೇ ಅಂಶವನ್ನು ಹೊಂದಿಲ್ಲ' ಎಂದು ಹೇಳಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ, ಜನವರಿ 30 ರಂದು ದಿ ವೈರ್ ಪ್ರಕಟಿಸಿದ, ಇಸ್ಮತ್ ಅರಾ ಬರೆದ ಸುದ್ದಿ ವರದಿಯನ್ನು ಹಂಚಿಕೊಂಡ ಟ್ವೀಟ್‌ಗಾಗಿ ದಿ ವೈರ್ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಒಂದು ದಿನದ ಬಳಿಕ ಅದು ದಿ ವೈರ್ ಮತ್ತು ಇಸ್ಮತ್ ಅರಾ ಅವರ ಹೆಸರನ್ನು ಎಫ್‌ಐಆರ್ ಗೆ ಸೇರಿಸಿತ್ತು.
26 ಜನವರಿ 2021 ರಂದು ರೈತರ ಟ್ರ್ಯಾಕ್ಟರ್ ರ್ಯಾಲಿಯ ವೇಳೆ ಸಾವನ್ನಪ್ಪಿದ ಪ್ರತಿಭಟನಾಕಾರ ನವರೀತ್ ಸಿಂಗ್ ಅವರ ಅಜ್ಜ ಹರ್ದೀಪ್ ಸಿಂಗ್ ದಿಬ್ದಿಬಾ ಅವರು ತಮ್ಮ ಮೊಮ್ಮಗ ಆಕಸ್ಮಿಕವಾಗಿ ಸಾವನ್ನಪ್ಪಿಲ್ಲ, ಗುಂಡಿನ ಗಾಯದಿಂದ ಸಾವನ್ನಪ್ಪಿದ್ದಾರೆ ಎಂದು ಉಲ್ಲೇಖಿಸಿದ್ದ ವರದಿಗಾಗಿ ಈ ಪ್ರಕರಣವನ್ನು ದಾಖಲಿಸಲಾಗಿತ್ತು.
ಟ್ರಾಕ್ಟರ್ ಪಲ್ಟಿಯಾದ ಕಾರಣ ಸಿಂಗ್ ಸಾವನ್ನಪ್ಪಿದ್ದಾರೆ ಎಂಬ ದಿಲ್ಲಿ ಪೊಲೀಸರ ಹೇಳಿಕೆಯನ್ನು ಒಪ್ಪಿಕೊಳ್ಳಲು ನವರೀತ್ ಸಿಂಗ್ ಅವರ ಕುಟುಂಬ ನಿರಾಕರಿಸಿತ್ತು. ನವ್ರೀತ್‌ಗೆ ಗುಂಡು ಹಾರಿಸಲಾಗಿದೆ ಎಂದು ಅವರು ಆರೋಪಿಸಿದ್ದರು. ಘಟನೆಗೆ ನಾವೇ ಸಾಕ್ಷಿ ಎಂದು ಹೇಳಿದ್ದ ರೈತರು ಕೂಡಾ ಅದೇ ಹೇಳಿಕೆಯನ್ನು ನೀಡಿದ್ದರು.