ನವದೆಹಲಿ :ಹಲವಾರು ದಿನಗಳ ಮುನಿಸಿನ ಬಳಿಕ ಗುಜರಾತಿನ ಕಾಂಗ್ರೆಸ್ ನಾಯಕ ಹಾರ್ದಿಕ ಪಟೇಲ್ ಅವರು ಬುಧವಾರ ಪಕ್ಷಕ್ಕೆ ವಿದಾಯ ಹೇಳಿದ್ದಾರೆ. ಪಟೇಲ್ ತನ್ನ ರಾಜೀನಾಮೆ ಪತ್ರದಲ್ಲಿ 2019ರಲ್ಲಿ ತನ್ನನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದ ರಾಹುಲ್ ಗಾಂಧಿಯವರನ್ನು ಸಾಕಷ್ಟು ಕಿಚಾಯಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಗುಜರಾತ್ ಕಾಂಗ್ರೆಸ್ ನಾಯಕರು,ಪಟೇಲ್ ಪತ್ರವು ಬಿಜೆಪಿಯಿಂದ ಬರೆಸಲ್ಪಟ್ಟಿದೆ ಮತ್ತು ಕಾಂಗ್ರೆಸ್ ತೊರೆಯುವಂತೆ ಅವರ ಮೇಲೆ ಒತ್ತಡ ಹೇರಲಾಗಿತ್ತು ಎಂದಿದ್ದಾರೆ.ಪಾಟಿದಾರ್ ಸಮುದಾಯದ ನಾಯಕ ಪಟೇಲ್ ಕಳೆದೆರಡು ತಿಂಗಳುಗಳಿಂದ ಬಿಜೆಪಿ ನಾಯಕತ್ವದೊಂದಿಗೆ ಸಂಪರ್ಕದಲ್ಲಿದ್ದರು ಮತ್ತು ವಾರದೊಳಗೆ ಅವರು ಆಡಳಿತ ಪಕ್ಷವನ್ನು ಸೇರುವ ಸಾಧ್ಯತೆಯಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಕಳೆದೆರಡು ವರ್ಷಗಳಲ್ಲಿ ಹಲವಾರು ಯುವನಾಯಕರು ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರೂ ಪಟೇಲ್ ತಾನು ಕಾಂಗ್ರೆಸ್‌ನಿಂದ ಬಿಜೆಪಿಗೆ ಸೇರುವುದನ್ನು ಈವರೆಗೆ ಬಲವಾಗಿ ನಿರಾಕರಿಸುತ್ತಲೇ ಬಂದಿದ್ದಾರೆ.ಇತ್ತೀಚಿಗಷ್ಟೇ ಚಿಂತನ ಶಿಬಿರದಲ್ಲಿ ಪಕ್ಷದ ಪುನಃಶ್ಚೇತನಕ್ಕಾಗಿ ಕಾರ್ಯತಂತ್ರಗಳನ್ನು ಚರ್ಚಿಸಿರುವ ಕಾಂಗ್ರೆಸ್ ಪಾಲಿಗೆ ಪಟೇಲ್ ವಿದಾಯವು ಈ ವರ್ಷ ನಡೆಯಲಿರುವ ಗುಜರಾತ್ ಚುನಾವಣೆಗೆ ಮುನ್ನ ಅಕಾಲಿಕ ನಿರ್ಗಮನವಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಬರೆದಿರುವ ತನ್ನ ರಾಜೀನಾಮೆ ಪತ್ರದಲ್ಲಿ ಪಟೇಲ್,ಇತ್ತೀಚಿನ ಗುಜರಾತ್ ಭೇಟಿ ಸಂದರ್ಭದಲ್ಲಿ ತನ್ನನ್ನು ಪ್ರತ್ಯೇಕವಾಗಿ ಭೇಟಿಯಾಗಿರದಿದ್ದ ರಾಹುಲ್ ಗಾಂಧಿಯವರ ವಿರುದ್ಧ ಸಾಕಷ್ಟು ಟೀಕಾಬಾಣಗಳನ್ನು ಪ್ರಯೋಗಿಸಿದ್ದಾರೆ.ತಾನು ಹಿರಿಯ ನಾಯಕರನ್ನು ಭೇಟಿಯಾದಾಗ ಅವರು ಗುಜರಾತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸುವ ಬದಲು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಮತ್ತು ಇತರ ವಿಷಯಗಳಲ್ಲಿ ವ್ಯಸ್ತರಾಗಿದ್ದರು. ಯಾತ್ರೆಗಳ ಸಂದರ್ಭದಲ್ಲಿ ಜನರೊಂದಿಗೆ ತೊಡಗಿಸಿಕೊಳ್ಳುವ ಬದಲಿಗೆ ಗುಜರಾತಿನ ಹಿರಿಯ ನಾಯಕರು ದಿಲ್ಲಿಯಿಂದ ಬಂದಿದ್ದ ನಾಯಕರಿಗೆ ಚಿಕನ್ ಸ್ಯಾಂಡ್‌ವಿಚ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚು ಆಸಕ್ತರಾಗಿದ್ದರು ಎಂದು ಪಟೇಲ್ ಬರೆದಿದ್ದಾರೆ.'ನಿರ್ಣಾಯಕ ಸಮಯದಲ್ಲಿ ಭಾರತಕ್ಕೆ ತನ್ನ ಅಗತ್ಯವಿದ್ದಾಗ ನಮ್ಮ ನಾಯಕರು ವಿದೇಶದಲ್ಲಿದ್ದರು' ಎಂದೂ ಪಟೇಲ್ ಕುಟುಕಿದ್ದಾರೆ.