ಬರ್ಲಿನ್: ಪ್ರಧಾನಿ ನರೇಂದ್ರ ಮೋದಿ ಯುರೋಪ್ ಪ್ರವಾಸದಲ್ಲಿದ್ದು, ಜರ್ಮನಿ ಹಾಗೂ ಭಾರತದ ಉದ್ಯಮ ನಾಯಕರೊಂದಿಗೆ ಸಂವಹನ ನಡೆಸಿದರು.
ಈ ವೇಳೆ ಭಾರತ ಸರ್ಕಾರ ಕೈಗೊಂಡಿರುವ ಸುಧಾರಣೆಗಳ ಬಗ್ಗೆ ಮೋದಿ ಮಾತನಾಡಿದ್ದು, ಯುವ ಭಾರತದಲ್ಲಿ ಹೂಡಿಕೆ ಮಾಡಲು ಉದ್ಯಮಿಗಳಿಗೆ ಆಹ್ವಾನ ನೀಡಿದ್ದಾರೆ. ಯುರೋಪ್ ಪ್ರವಾಸದ ಮೊದಲ ಭಾಗವಾಗಿ ಪ್ರಧಾನಿ ಮೋದಿ ಜರ್ಮನಿಗೆ ಭೇಟಿ ನೀಡಿದ್ದು ಅಲ್ಲಿನ ಚಾನ್ಸೆಲರ್ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.
"ಬರ್ಲಿನ್ ನಲ್ಲಿ ಮುಂಚೂಣಿಯಲ್ಲಿರುವ ಉದ್ಯಮ ನಾಯಕರೊಂದಿಗೆ ಚರ್ಚೆ ನಡೆಸಿ, ಭಾರತ-ಜರ್ಮನಿಯ ನಡುವೆ ವ್ಯಾಪಾರವನ್ನು ಮತ್ತಷ್ಟು ಹೆಚ್ಚಿಸುವ ಬಗ್ಗೆ ಮಾತನಾಡಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಭಾರತದಲ್ಲಿ ಹೆಚ್ಚುತ್ತಿರುವ ಸ್ಟಾರ್ಟ್ ಅಪ್ ಗಳು ಹಾಗೂ ಯೂನಿಕಾರ್ನ್ ಗಳ ಸಂಖ್ಯೆಯ ಬಗ್ಗೆ ಪ್ರಧಾನಿ ಬರ್ಲಿನ್ ನಲ್ಲಿ ವಿಶೇಷವಾಗಿ ಮಾತನಾಡಿದರು ಎಂದು ವಿದೇಶಾಂಗ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.