ಧರ್ಮಶಾಲಾ: ಹಿಮಾಚಲ ಪ್ರದೇಶದ ವಿಧಾನಸಭೆಯ ಪ್ರವೇಶ ದ್ವಾರ ಮತ್ತು ಗೋಡೆಯ ಮೇಲೆ ಭಾನುವಾರ ಬೆಳಗ್ಗೆ ಖಲಿಸ್ತಾನ್ ಧ್ವಜಗಳು ಕಂಡುಬಂದಿವೆ. ಈ ಕೃತ್ಯವನ್ನು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ ಖಂಡಿಸಿದ್ದು, ಇದರ ಹಿಂದಿರುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಧರ್ಮಶಾಲಾ ಅಸೆಂಬ್ಲಿ ಕಾಂಪ್ಲೆಕ್ಸ್ ನ ಗೇಟ್ ನಲ್ಲಿ ಖಲಿಸ್ತಾನ ಧ್ವಜ ಹಾಕಿರುವುದು ತೀವ್ರ ಖಂಡನೀಯವಾಗಿದೆ. ಇಲ್ಲಿ ಚಳಿಗಾಲದ ಅಧಿವೇಶನ ಮಾತ್ರ ನಡೆಯುವುದರಿಂದ ಆ ಸಮಯದಲ್ಲಿ ಹೆಚ್ಚಿನ ಭದ್ರತಾ ವ್ಯವಸ್ಥೆಗಳ ಅಗತ್ಯವಿದೆ. ಘಟನೆಯ ಕುರಿತು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಹಿಮಾಚಲ ಪ್ರದೇಶ ಸಿಎಂ ಹೇಳಿದ್ದಾರೆ.
ತಡರಾತ್ರಿ ಅಥವಾ ಭಾನುವಾರ ಬೆಳಗ್ಗೆ ಇದು ನಡೆದಿರಬಹುದು. ವಿಧಾನಸಭಾ ಗೇಟ್ ನಿಂದ ಖಲಿಸ್ತಾನ್ ಧ್ವಜಗಳನ್ನು ತೆಗೆದುಹಾಕಿದ್ದೇವೆ. ಪಂಜಾಬಿನಿಂದ ಪ್ರವಾಸಕ್ಕೆ ಬಂದ ಕೆಲವರು ಇದನ್ನು ಮಾಡಿಬರಹುದು. ಈ ಸಂಬಂಧ ಕೇಸ್ ದಾಖಲಿಸಲಾಗುವುದು ಎಂದು ಎಸ್ ಪಿ ಕುಶಾಲ್ ಶರ್ಮಾ ಹೇಳಿದ್ದಾರೆ.