ನವದೆಹಲಿ:'ಪೆಟ್ರೋಲ್ ದರ ಇಳಿಕೆ ವಿಚಾರವಾಗಿ ಕೇಂದ್ರ ಸರ್ಕಾರದ ಕಾಲೆಳೆದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಇನ್ನು ನಿತ್ಯ ಬೆಲೆ ಏರಿಕೆ ನೀರಿಕ್ಷಿಸಬಹುದು ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, ಇನ್ನು ಪುನಃ ಪ್ರತಿದಿನವೂ 0.8 ಮತ್ತು 0.3 ಏರಿಕೆಯನ್ನು ನಿರೀಕ್ಷಿಸಬಹುದು' ಎಂದು ಟ್ವೀಟ್ ಮಾಡಿದ್ದಾರೆ.
'ಮೇ 1, 2020ರಲ್ಲಿ ಒಂದು ಲೀಟರ್ ಪೆಟ್ರೋಲ್ ದರ 69.5ರೂ ಇತ್ತು. ಮಾರ್ಚ್ 1, 2020ರಲ್ಲಿ ಪೆಟ್ರೋಲ್ ಬೆಲೆ 95.4ರೂ ಇತ್ತು. ಮೇ 1, 2022ರಲ್ಲಿ 105.4ರೂ ಇತ್ತು. ಇದೀಗ ಮೇ 22, 2022ರಂದು 96.7ರೂ ಇದೆ' ಎಂದು ರಾಹುಲ್ ಗಾಂಧಿ ದರ ಪಟ್ಟಿ ಮಾಡಿದ್ದಾರೆ.
'ಇದೀಗ ಪೆಟ್ರೋಲ್ ದರ 'ವಿಕಾಸ'ದ ರೂಪದಲ್ಲಿ ಪುನಃ ಪ್ರತಿದಿನವೂ 0.8ರೂ ಮತ್ತು 0.3ರೂ ಏರಿಕೆಯನ್ನು ನಿರೀಕ್ಷಿಸಬಹುದು. ಜನರನ್ನು ಮೂರ್ಖರನ್ನಾಗಿಸುವುದನ್ನು ಸರ್ಕಾರ ನಿಲ್ಲಿಸಬೇಕು. ದಾಖಲೆ ಪ್ರಮಾಣದ ಹಣದುಬ್ಬರದಿಂದ ನಿಜವಾದ ನಿರಾಳತೆಗೆ ಜನರು ಅರ್ಹರು' ಎಂದು ರಾಹುಲ್ ಗಾಂಧಿ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಹಣದುಬ್ಬರ ನಿಯಂತ್ರಿಸಲು ಮತ್ತು ಅಗತ್ಯ ವಸ್ತುಗಳ ದರ ಏರಿಕೆ ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಎಕ್ಸೈಸ್ ಸುಂಕವನ್ನು ಪ್ರತಿ ಲೀಟರಿಗೆ ಕ್ರಮವಾಗಿ 8ರೂ ಮತ್ತು 6ರೂ ಕಡಿತ ಮಾಡಿದ ಬೆನ್ನಲ್ಲೇ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.