ಕಾಸರಗೋಡು: ಹೊಸದುರ್ಗ ಜಿಲ್ಲಾ ಕಾರಾಗೃಹದಲ್ಲಿ ಕೊಯ್ಲು ಮಾಡಿದ 100 ಕೆಜಿ ಕುಂಬಳಕಾಯಿಯನ್ನು ಅಂಬಲತ್ತರದ ಎಂಡೋ ಬಡ್ಸ್ ಶಾಲೆ'ಸ್ನೇಹದ ಮನೆ'ಗೆ ಹಸ್ತಾಂತರಿಸಲಾಯಿತು. ಕಾರಾಗೃಹಗಳು ಬದಲಾವಣೆಯ ಹೊಸ ದಿಶೆಯತ್ತ ಸಾಗುತ್ತಿವೆ ಎಂಬುದನ್ನು ಹಲವು ಚಟುವಟಿಕೆಗಳ ಮೂಲಕ ಹೊಸದುರ್ಗ ಜಿಲ್ಲಾ ಕಾರಾಗೃಹ ಸಾಬೀತುಪಡಿಸಿದೆ. ಇಲ್ಲಿ ಕೈದಿಗಳು ಬೆಳೆಸಿರುವ 100 ಕೆಜಿ ಕುಂಬಳಕಾಯಿಯನ್ನು ಅಂಬಲತ್ತರದಲ್ಲಿರುವ ಸ್ನೇಹದ ಮನೆಗೆ ಹಸ್ತಾಂತರಿಸಲಾಯಿತು. ಹಸಿರು ಕೇರಳ ಮಿಷನ್ ಅಂಗವಾಗಿ ಹೊಸದುರ್ಗ ಜಿಲ್ಲಾ ಕಾರಾಗೃಹ ಸಂಪೂರ್ಣ ಸಾವಯವ ವಿಧಾನದ ಮೂಲಕ ಕೃಷಿ ನಡೆಸಲಾಗುತ್ತಿದೆ. ಕೃಷಿಗೆ ಬೇಕಾದ ಗೊಬ್ಬರವನ್ನೂ ಜೈಲಿನಿಂದಲೇ ಉತ್ಪಾದಿಸಲಾಗುತ್ತಿದ್ದು, ಈ ಬಾರಿ ಕುಂಬಳಕಾಯಿ ಸೇರಿದಂತೆ ಸುಮಾರು 200 ಕೆ.ಜಿ ತರಕಾರಿ ಇಳುವರಿ ಬಂದಿದೆ. ಅದರಲ್ಲಿ 100 ಕೆ.ಜಿ ಜೈಲಿನ ಅಗತ್ಯಗಳಿಗಾಗಿ ಮತ್ತು ಉಳಿದ 100 ಕೆಜಿ ತರಕಾರಿಯನ್ನು ಸ್ನೇಹದ ಮನೆ ಬಡ್ಸ್ ಶಾಲೆಗೆ ನೀಡಲಾಯಿತು.
ಕಾಞಂಗಾಡು ಕೃಷಿ ಭವನದ ಸಹಕಾರದೊಂದಿಗೆ ತರಕಾರಿ ಕೃಷಿ ನಡೆಸಲಾಗುತ್ತಿದೆ. ಇಂತಹ ಚಟುವಟಿಕೆಗಳಿಂದ ಕೈದಿಗಳ ಮಾನಸಿಕ ಪರಿವರ್ತನೆ ಹಾಗೂ ಸಾವಯವ ಕೃಷಿಯ ಸಂದೇಶವನ್ನು ಸಮಾಜದಲ್ಲಿ ಸಾರಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಕಾರಾಗೃಹ ಅಧೀಕ್ಷಕ ಕೆ. ವೇಣು ತಿಳಿಸುತ್ತಾರೆ. ಕಾಞಂಗಾಡು ನಗರಸಭಾ ಅಧ್ಯಕ್ಷೆ ಕೆ.ಎಸ್. ವಿ. ಸುಜಾತಾ ಅವರು ಸ್ನೇಹದ ಮನೆ ಅಧ್ಯಕ್ಷ ವಕೀಲ ರಾಜೇಂದ್ರನ್ ಅವರಿಗೆ ಕೊಯ್ಲು ಮಾಡಿದ ಕುಂಬಳಕಾಯಿ ಹಸ್ತಾಂತರಿಸಿದರು. ಜೈಲು ಅಧೀಕ್ಷಕ ಕೆ. ವೇಣು ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಲತಾ, ಕೃಷಿ ಅಧಿಕಾರಿ ಮುರಳೀಧರನ್, ಕೃಷಿ ಸಹಾಯಕ ರವೀಂದ್ರನ್, ಸಹಾಯಕ ಅಧೀಕ್ಷಕಿ ಮೃದುಲಾ ವಿ ನಾಯರ್, ಗ್ರೇಡ್ 2 ಸಹಾಯಕ ಅಧೀಕ್ಷಕ ಪಿ ಕೆ ಷಣ್ಮುಖನ್, ಉಪ ಕಾರಾಗೃಹ ಅಧಿಕಾರಿಗಳಾದ ಜಿಮ್ಮಿ ಜಾನ್ಸನ್ ಮತ್ತು ಎಂವಿ ಸಂತೋಷ್ ಕುಮಾರ್, ಸಹಾಯಕ ಕಾರಾಗೃಹ ಅಧಿಕಾರಿ ಕೆವಿ ಸುರ್ಜಿತ್, ಕೆವಿ ವಿಜಯನ್ ಮತ್ತು ಮಹಿಳಾ ಸಹಾಯಕ ಕಾರಾಗೃಹ ಅಧಿಕಾರಿ ಕೆ ಸ್ಮಿತಾ ಉಪಸ್ಥಿತರಿದ್ದರು.