ಚಂಡಿಗಢ: ನಿಂಬೆಹಣ್ಣಿನಿಂದಾಗಿ ಪಂಜಾಬ್ನ ಜೈಲು ಅಧಿಕಾರಿ ಕೆಲಸವೇ ಕಳೆದುಕೊಳ್ಳುವಂತಾಗಿದೆ. ಅರೆ ಏನಿದು, ನಿಂಬೆಹಣ್ಣಿಗೂ ಕೆಲಸಕ್ಕೂ ಏನು ಸಂಬಂಧ ಎಂದು ಹುಬ್ಬೇರಿಸುವವರಿಗೆ ಇಲ್ಲಿದೆ ಕಾರಣ.
ಇತ್ತೀಚಿನ ದಿನಗಳಲ್ಲಿ ಹಗರಣಳದ್ದೇ ಸುದ್ದಿ ಎಲ್ಲಿ ನೋಡಿದರೂ, ಯಾವ ಕ್ಷೇತ್ರದಲ್ಲಾದರೂ ಸರಿ ಹಗರಣ ಎನ್ನುವುದು ಸಾಮಾನ್ಯವಾಗಿದೆ ಎಂಬಂತಾಗಿದೆ.
ಇಲ್ಲಿ ಕಾಪುರ್ತಲಾ ಮಾಡ್ರನ್ ಜೈಲಿನಲ್ಲಿ ನಿಂಬೆಹಣ್ಣು ಖರೀದಿಯಲ್ಲಿ ಹಗರಣ ನಡೆದಿದೆಯಂತೆ. ಅದಕ್ಕಾಗಿ ಜೈಲು ಅಧಿಕಾರಿ ಗುರ್ನಾಮ್ ಲಾಲ್ನನ್ನು ಶನಿವಾರ ಅಮಾನತುಗೊಳಿಸಲಾಗಿದೆ.
50 ಕೆಜಿ ನಿಂಬೆ ಖರೀದಿಯಲ್ಲಿ ಅಕ್ರಮ ನಡೆದಿರುವುದು ಬಯಲಾಗಿದೆ. ಜೈಲಿನಲ್ಲಿ ತಯಾರಿಸುವ ಆಹಾರಕ್ಕೆ 50 ಕೆಜಿ ನಿಂಬೆಹಣ್ಣು ಖರೀದಿಸಲಾಗಿದೆ ಎಂದು ದಾಖಲೆಗಳಲ್ಲಿ ಬರೆಯಲಾಗಿದೆ. ಆದರೆ ಖರೀದಿಸಿರುವ ನಿಂಬೆಹಣ್ಣು ಕಾಣದಿದ್ದಾಗ ಅನುಮಾನಗೊಂಡ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ನಿಜ ಸಂಗತಿ ಹೊರಬರುತ್ತಿದ್ದಂತೆ ಜೈಲು ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ.
ಉತ್ತರ ಭಾರತದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿರುವುದರಿಂದ ಕಳೆದೆರಡು ತಿಂಗಳಿನಿಂದ ನಿಂಬೆಹಣ್ಣಿನ ಬೆಲೆಯಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಕೆಜಿ ನಿಂಬೆ ಹಣ್ಣು 200 ರಿಂದ 250 ರೂ.ಗಳಿಗೆ ಮಾರಾಟವಾಗುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಜೈಲಧಿಕಾರಿ ನಿಂಬೆಹಣ್ಣಿನಲ್ಲೂ ದುಡ್ಡು ಮಾಡಿಕೊಳ್ಳಲು ಪ್ರಯತ್ನಿಸಿ ಸಿಕ್ಕಿಬಿದ್ದಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಜೈಲಿನಲ್ಲಾಗುತ್ತಿರುವ ಅಕ್ರಮಗಳ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಪಂಜಾಬ್ನ ಗಣಿ ಮತ್ತು ಪ್ರವಾಸೋದ್ಯಮ ಸಚಿವ ಹರ್ಜೀರ್ ಸಿಂಗ್ ಬೈನ್ಸ್ ತಿಳಿಸಿದ್ದಾರೆ.