ಕೊಲಂಬೊ: ಸಾಲದ ಸುಳಿಯಲ್ಲಿ ಸಿಲುಕಿ ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳ ನಂತರ ವಿರೋಧ ಪಕ್ಷದ ನಾಯಕ ರಾನಿಲ್ ವಿಕ್ರಮಸಿಂಘೆ ಅವರು ದ್ವೀಪ ರಾಷ್ಟ್ರದ ನೂತನ ಪ್ರಧಾನಿಯಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದರು.
ತೀವ್ರ ಪ್ರತಿಭಟನೆಯ ನಂತರ ಮಹಿಂದ ರಾಜಪಕ್ಸೆ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ ಕೆಲವು ದಿನಗಳ ನಂತರ 73 ವರ್ಷದ ಮಾಜಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ನೂತನ ಪ್ರಧಾನಿಯಾಗಿ ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರು ನೇಮಕ ಮಾಡಿದ್ದಾರೆ.
ನಾಲ್ಕು ಬಾರಿ ದ್ವೀಪ ರಾಷ್ಟ್ರದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ವಿಕ್ರಮಸಿಂಘೆ ಅವರನ್ನು ಅಕ್ಟೋಬರ್ 2018 ರಲ್ಲಿ ಅಂದಿನ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಪ್ರಧಾನಿ ಹುದ್ದೆಯಿಂದ ವಜಾಗೊಳಿಸಿದ್ದರು. ಆದಾಗ್ಯೂ, ಎರಡು ತಿಂಗಳ ನಂತರ ಸಿರಿಸೇನಾ ಅವರು ವಿಕ್ರಮಸಿಂಘೆ ಅವರನ್ನು ಮತ್ತೆ ಪ್ರಧಾನಿಯಾಗಿ ನೇಮಕ ಮಾಡಿದ್ದರು.
ಆಡಳಿತಾರೂಢ ಶ್ರೀಲಂಕಾ ಪೊದುಜನ ಪೆರಮುನಾ(ಎಸ್‌ಎಲ್‌ಪಿಪಿ), ಪ್ರಮುಖ ವಿರೋಧ ಪಕ್ಷವಾದ ಸಮಗಿ ಜನ ಬಲವೇಗಯ(ಎಸ್‌ಜೆಬಿ) ಮತ್ತು ಇತರ ಹಲವು ಪಕ್ಷಗಳ ಸದಸ್ಯರು ಸಂಸತ್ತಿನಲ್ಲಿ ವಿಕ್ರಮಸಿಂಘೆಗೆ ಬೆಂಬಲ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.