ಬದಿಯಡ್ಕ: ಬ್ರಹ್ಮಶ್ರೀ ವೇದಮೂರ್ತಿ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ಬುಧವಾರ ಬೆಳಗ್ಗೆ 7.30ರಿಂದ 8.03ರ ಮಿಥುನ ಲಗ್ನ ಸಮುಹೂರ್ತದಲ್ಲಿ ಕುದ್ರೆಪ್ಪಾಡಿ ಶ್ರೀಸುಬ್ರಹ್ಮಣ್ಯೇಶ್ವರ ಶ್ರೀ ದೇವರ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ ಜರಗಿತು.
ಪ್ರಾತಃಕಾಲ 108 ಕಾಯಿ ಮಹಾಗಣಪತಿ ಹೋಮ ಜರಗಿತು. ಈ ಸಂದರ್ಭದಲ್ಲಿ ವೇದಮೂರ್ತಿ ಮಹಾದೇವ ಭಟ್ ಕೋಣಮ್ಮೆ ಇವರ ನೇತೃತ್ವದಲ್ಲಿ ರುದ್ರಪಾರಾಯಣ, ವಿವಿಧ ಭಜನಾ ಸಂಘಗಳಿಂದ ಭಜನೆ ನಡೆಯಿತು. ಸಿದ್ಧಾರ್ಥ ಪ್ರಕಾಶ ಚೆನ್ನೈ ಮತ್ತು ಬಳಗದವರಿಂದ ಕರ್ನಾಟಕ ಸಂಗೀತ, ಶ್ರೀ ಗೋಪಾಲಕೃಷ್ಣ ಕೆ., ವೀರಾಂಜನೇಯ ಕ್ಷೇತ್ರ ಕುದ್ರೆಪ್ಪಾಡಿ ಇವರ ಪ್ರಾಯೋಜಕತ್ವದಲ್ಲಿ ಸಾಯಿ ಮನೋಹರ್ ಮತ್ತು ಬಳಗದವರಿಂದ ಭಕ್ತಿಸಂಗೀತ ರಸಮಂಜರಿ ನಡೆಯಿತು. ಮಧ್ಯಾಹ್ನ ನೂರಾರು ಭಕ್ತಾದಿಗಳು ಭೋಜನ ಪ್ರಸಾದ ಸ್ವೀಕರಿಸಿದರು. ರಾತ್ರಿ ಶ್ರೀ ದೇವರ ಬಲಿ ಉತ್ಸವ, ಪ್ರಸಾದ ವಿತರಣೆ ಜರಗಿತು.