ನವದೆಹಲಿ: ಕಾಶ್ಮೀರಿ ಪಂಡಿತರು ಏಕೆ ಇನ್ನೂ ಸುರಕ್ಷಿತರಲ್ಲ ಎಂದು ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಸೋಮವಾರ ಕೇಂದ್ರ ಸರ್ಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, 'ಕಾಶ್ಮೀರದಲ್ಲಿ ಕೆಲ ದಿನಗಳ ಹಿಂದೆ ಕಾಶ್ಮೀರಿ ಪಂಡಿತರೊಬ್ಬರನ್ನು (ರಾಹುಲ್ ಭಟ್) ಅವರ ಕಚೇರಿಯಲ್ಲೇ ಹತ್ಯೆ ಮಾಡಲಾಯಿತು.
'ಘಟನೆ ನಂತರ ಕಾಶ್ಮೀರಿ ಪಂಡಿತರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುವ ಸಲುವಾಗಿ ಪ್ರತಿಭಟಿಸಲು ಮುಂದಾಗಿದ್ದರು. ಆದರೆ ಅವರನ್ನು ತಡೆಯಲಾಗಿದೆ. ಅವರ ಮೇಲೆ ಹಲ್ಲೆ ಮಾಡಲಾಗಿದೆ. ಅವರ ಮನೆಗಳಿಗೆ ಬೀಗ ಹಾಕಲಾಗಿದೆ. ರಾಜಕೀಯ ಮಾಡಲು ಇದು ಸಮಯವಲ್ಲ. ಸಮುದಾಯ ಈಗ ಸುರಕ್ಷತೆ ಬಯಸುತ್ತಿದೆ. ಸುರಕ್ಷತೆ ಸಿಗದೇ ಹೋದರೆ, ಇನ್ನಿತರ ಕಾಶ್ಮೀರಿ ಪಂಡಿತರು ಕಣಿವೆಗೆ ಹಿಂತಿರುಗುವುದಾದರೂ ಹೇಗೆ? ಅವರಿಗೆ ಭದ್ರತೆ ಒದಗಿಸುವತ್ತ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಬೇಕು' ಎಂದು ಕೇಜ್ರಿವಾಲ್ ಆಗ್ರಹಿಸಿದರು.
ಮಧ್ಯ ಕಾಶ್ಮೀರದ ಬುಡ್ಗಾಂ ಜಿಲ್ಲೆಯ ಚದೂರ ತಹಶೀಲ್ ಕಚೇರಿಯಲ್ಲಿ ಕಳೆದ ಗುರುವಾರ ಉಗ್ರನೊಬ್ಬ ಕಾಶ್ಮೀರಿ ಪಂಡಿತ ಸಮುದಾಯದ ಸರ್ಕಾರಿ ನೌಕರ ರಾಹುಲ್ ಭಟ್ ಎಂಬುವವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ.