ನವದೆಹಲಿ: ರಷ್ಯಾ-ಉಕ್ರೇನ್ ಯುದ್ಧದ್ದ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಜರ್ಮನಿ, ಡೆನ್ಮಾರ್ಕ್ ಮತ್ತು ಫ್ರಾನ್ಸ್ ಗೆ ಭೇಟಿ ನೀಡುತ್ತಿದ್ದು, ತಮ್ಮ ಭೇಟಿಯಿಂದ ಯುರೋಪಿಯನ್ ರಾಷ್ಟ್ರಗಳು ಮತ್ತು ಭಾರತದೊಂದಿಗೆ ಸಹಕಾರ ಬಲವರ್ಧನೆಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಜರ್ಮನಿ ಛಾನ್ಸಲರ್ ಓಲಾಫ್ ಸ್ಕೋಲ್ಜ್ ಅವರ ಆಹ್ವಾನದ ಮೇರೆಗೆ ನಾಳೆ ಬರ್ಲಿನ್ ಗೆ ತೆರಳುತ್ತಿದ್ದು,ಡ್ಯಾನಿಶ್ ಪ್ರಧಾನ ಮಂತ್ರಿ ಮೆಟ್ಟೆ ಫ್ರೆಡೆರಿಕ್ಸೆನ್ ಅವರ ಆಹ್ವಾನದ ಮೇರೆಗೆ ಮೇ 3 ಮತ್ತು 4 ರಂದು ಕೋಪನ್ ಹ್ಯಾಗನ್ ಗೆ ಭೇಟಿ ನೀಡುತ್ತಿದ್ದು, ದ್ವಿಪಕ್ಷೀಯ ಸಂಬಂಧ ಮತ್ತು ಎರಡನೇ ಭಾರತ- ನಾರ್ಡಿಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಮೋದಿ ಹೇಳಿದ್ದಾರೆ.
ಭಾರತಕ್ಕೆ ವಾಪಸ್ಸಾಗುವಾಗ ಪ್ಯಾರಿಸ್ ನಲ್ಲಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರನ್ ಅವರೊಂದಿಗೆ ಸಭೆ ನಡೆಸಲಿದ್ದು, ಯುರೋಪಿಯನ್ ರಾಷ್ಟ್ರಗಳೊಂದಿಗೆ ಸಹಕಾರ ಬಲವರ್ಧನೆ ತಮ್ಮ ಪ್ರವಾಸದ ಉದ್ದೇಶವಾಗಿದೆ. ಶಾಂತಿ ಮತ್ತು ಸೌಹಾರ್ದತೆ ಕಾಪಾಡುವಲ್ಲಿ ಆ ರಾಷ್ಟ್ರಗಳ ಪಾತ್ರವೂ ಪ್ರಮುಖವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.