ಬದಿಯಡ್ಕ: ಗುಣಮಟ್ಟ ಹಾಗೂ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡವುದಲ್ಲದೆ ಸಾರ್ವಜನಿಕರ ಆರೋಗ್ಯಕ್ಕೆ ಪೂರಕವಾದ ವಸ್ತುಗಳನ್ನೇ ಮಾರಾಟ ಮಾಡಬೇಕು. ನಮ್ಮ ಕರ್ತವ್ಯವನ್ನು ನಾವು ಮಾಡಿದರೆ ಯಾರ ಮುಂದೆಯೂ ತಲೆತಗ್ಗಿಸಬೇಕಾದ ಅಗತ್ಯವಿಲ್ಲ ಎಂದು ಮರ್ಚೆಂಟ್ಸ್ ಏಂಡ್ ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಶನ್‍ನ ಜಿಲ್ಲಾ ಸಮಿತಿ ಅಧ್ಯಕ್ಷ ಅಹಮ್ಮದ್ ಶರೀಫ್ ಅಭಿಪ್ರಾಯಪಟ್ಟರು.
ಬುಧವಾರ ಬದಿಯಡ್ಕ ಸಂಸ್ಕøತಿ ಭವನದಲ್ಲಿ ಜರಗಿದ ಬದಿಯಡ್ಕ ಮರ್ಚೆಂಟ್ಸ್ ಮತ್ತು ಇಂಡಸ್ಟ್ರಿಯಲಿಸ್ಟ್ ಅಸೋಸಿಯೇಶನ್‍ನ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಂಘಟನೆಯನ್ನು ಬಲಪಡಿಸುವಲ್ಲಿ ಪದಾಧಿಕಾರಿಗಳು ಪ್ರಮುಖ ಪಾತ್ರವಹಿಸಬೇಕು. ಸಂಘಟನೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬ ಸದಸ್ಯನೂ ಪಾಲ್ಗೊಳ್ಳುವುದು ಹೆಚ್ಚಿನ ಚಟುವಟಿಕೆಗಳಿಗೆ ಪೂರಕವಾಗಿರುತ್ತದೆ. ಸದಸ್ಯರ ಬೆಂಬಲವು ಪದಾಧಿಕಾರಿಗಳಿಗೆ ಬಲವನ್ನೊದಗಿಸುತ್ತದೆ ಎಂದು ಕರೆಯಿತ್ತರು.
ಬದಿಯಡ್ಕ ಘಟಕ ಅಧ್ಯಕ್ಷ ಮುಹಮ್ಮದ್ ಕುಂಞÂ ಕುಂಜಾರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಕೆ.ಸಜಿ, ಜಿಲ್ಲಾ ಉಪಾಧ್ಯಕ್ಷ ಶಂಕರನಾರಾಯಣ ಮಯ್ಯ ಮಾತನಾಡಿದರು. ಜಿಲ್ಲಾ ಕಾರ್ಯದರ್ಶಿ ಸಿಹಾಬ್ ಉಸ್ಮಾನ್ ವ್ಯಾಪಾರಿ ಕ್ಷೇಮನಿಯ ಕುರಿತು ಮಾಹಿತಿಯನ್ನು ನೀಡಿ ಎಲ್ಲಾ ಸದಸ್ಯರೂ ಪಾಲ್ಗೊಳ್ಳುವಂತೆ ಸಲಹೆಯನ್ನು ನೀಡಿದರು. ಜಿಲ್ಲಾ ಕಾರ್ಯಾಲಯದ ಗೋಪಿನಾಥನ್ ಪಾಲ್ಗೊಂಡಿದ್ದರು. ಘಟಕದ ಪ್ರಧಾನ ಕಾರ್ಯದರ್ಶಿ ನರೇಂದ್ರ ಬಿ.ಎನ್. ವಾರ್ಷಿಕ ವರದಿ ಹಾಗೂ ಕೋಶಾಧಿಕಾರಿ ಬಿ.ಜ್ಞಾನದೇವ ಶೆಣೈ ಲೆಕ್ಕಪತ್ರ ಮಂಡಿಸಿದರು. 2022-24ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.