ಮನೆಯಲ್ಲಿ ಪ್ರಿಕೆಜಿ, ಎಲ್ ಕೆಜಿ ಸೇರಿಸುವ ಪ್ರಾಯದ ಮಕ್ಕಳಿದ್ದರೆ ಪೋಷಕರಿಗೆ ಮಕ್ಕಳನ್ನು ಯಾವ ಸ್ಕೂಲ್‌ಗೆ ಸೇರಿಸಬೇಕು? ಎಂಬ ಗೊಂದಲವೋ ಗೊಂದಲ. ಒಳ್ಳೆಯ ಸ್ಕೂಲ್ಗೆ ಸೇರಿಸಬೇಕು ಎಂಬ ಆಸೆ, ಆದರೆ ಕೆಲ ಸ್ಕೂಲ್‌ನ ಫೀಸ್ ಕೇಳಿದರೆ ತಲೆ ಸುತ್ತು ಬಂದಂತೆ ಅನಿಸುವುದು. ಇನ್ನು ಕೆಲವು ಕಡೆ ಶಾಲೆಯಲ್ಲಿ ನಾವು ಬಯಸಿದಂಥ ಸೌಲಭ್ಯ ಇರಲ್ಲ ಅಂದರೆ ಮೈದಾನ, ಸ್ಮಾರ್ಟ್ ಕ್ಲಾಸ್, ನಾವು ಬಯಸಿದಂಥ ಗುಣ ಮಟ್ಟದ ಬೋಧನೆ. ಇನ್ನು ಕೆಲ ಸ್ಕೂಲ್ ಪೀಸ್‌ನಲ್ಲಿ, ಗುಣಮಟ್ಟದಲ್ಲಿ ಚೆನ್ನಾಗಿರುತ್ತದೆ, ಆದರೆ ಸ್ವಲ್ಪ ದೂರದಲ್ಲಿರುತ್ತದೆ. ಆದ್ದರಿಂದ ಯಾವ ಶಾಲೆಗೆ ಕಳುಹಿಸಬೇಕೆಂಬ ಗೊಂದಲ. ಯಾರನ್ನಾದರೂ ಅಭಿಪ್ರಾಯ ಕೇಳೋಣ ಎಂದರೆ ಒಬ್ಬೊಬ್ಬರು ಒಂದೊಂದು ಅಭಿಪ್ರಾಯ ಹೇಳುತ್ತಾರೆ.
ಸ್ವಲ್ಪ ರಿಲ್ಯಾಕ್ಸ್ ಮಾಡಿಕೊಳ್ಳಿ. ನಿಮ್ಮ ಮಗುವನ್ನು ಯಾವ ಶಾಲೆಗೆ ಸೇರಿಸಬೇಕೆಂದು ಎಂದು ತೀರ್ಮಾನಿಸುವ ಮುನ್ನ ಈ ಪ್ರಶ್ನೆಗಳನ್ನು ನಿಮ್ಮಲ್ಲಿಯೇ ಕೇಳಿ ಉತ್ತರ ಕಂಡುಕೊಳ್ಳಿ, ಆಗ ಯಾವ ಶಾಲೆಗೆ ಸೇರಿಸಬೇಕು ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಾಗುವುದು:
1. ಯಾವ ಶಾಲೆ ಸಮೀಪದಲ್ಲಿದೆ ಚಿಕ್ಕ ಮಕ್ಕಳನ್ನು ದೂರದ ಸ್ಕೂಲ್‌ಗೆ ಕಳುಹಿಸಿದರೆ ವ್ಯಾನ್‌ನಲ್ಲಿ ಸುತ್ತಿ-ಸುತ್ತಿಯೇ ಸುಸ್ತಾಗಿರುತ್ತಾರೆ. ಆದ್ದರಿಂದ ಅವರಿಗೆ ಪಾಠ- ಆಟದ ಕಡೆ ಗಮನ ನೀಡಲು ಸಾಧ್ಯವಾಗುವುದಿಲ್ಲ. ಬದಲಿಗೆ ಸಮೀಪ ಸ್ಕೂಲ್‌ಗೆ ಸೇರಿಸಿದರೆ ಮನೆಯಿಂದ ಶಾಲೆಗೆ, ಶಾಲೆಯಿಂದ ಮನೆಗೆ ಬರಲು ಸುಲಭವಾಗುವುದು. ಆದ್ದರಿಂದ ಮಕ್ಕಳನ್ನು ಸಮೀಪದ ಶಾಲೆಗೆ ಸೇರಿಸುವುದು ಉತ್ತಮ ಆಯ್ಕೆ.
2. ಶಾಲೆಯ ಗುಣಮಟ್ಟದ ಕಡೆ ಗಮನ ನೀಡಿ ಪ್ರತಿಯೊಂದು ಶಾಲೆಯೂ ನಾವು ಅತ್ಯುತ್ತಮ ಎಂದು ಬಿಂಬಿಸಿಕೊಳ್ಳುತ್ತಿರುತ್ತದೆ, ಇನ್ನು ಕೆಲವರಿಗೆ ಅಂಥ ಸ್ಕೂಲ್‌ನಲ್ಲಿ ಓದಿಸುತ್ತಿದ್ದೇನೆ ಎಂಬುವುದು ಪ್ರೆಸ್ಟೇಜ್ ವಿಷಯವಾಗಿರುತ್ತೆ. ಆದರೆ ನೀವು ನಿಮ್ಮ ಮಗುವಿಗೆ ಯಾವ ರೀತಿಯ ಶಿಕ್ಷಣ ನೀಡ ಬಯಸುತ್ತಿದ್ದೀರಾ ಎಂಬುವುದು ಯೋಚಿಸಿ. ಆ ಶಾಲೆಯಲ್ಲಿ ಓದಿನಷ್ಟೇ, ಪಠ್ಯೇತರ ಚಟುವಟಿಕೆಗೂ ಗಮನ ನೀಡುತ್ತಿದ್ದಾರೆಯೇ? ಆ ಶಾಲೆಯಲ್ಲಿ ಸ್ಕಾಲರ್‌ಶಿಪ್ ಪ್ರೋಗ್ರಾಂ, ನ್ಯಾಷನಲ್, ಇಂಟರ್ ನ್ಯಾಷನಲ್ ಲೆವಲ್ ವರ್ಕ್‌ಶಾಪ್ ನಡೆಸುತ್ತಾರಾ? ಎಂಬುವುದೆಲ್ಲಾ ತಿಳಿಯಿರಿ. ಬರೀ ಓದು ಮಾತ್ರ ಸಾದು ಮಕ್ಕಳಲ್ಲಿ ಗೌಪ್ಯವಾಗಿರುವ ಕೌಶಲ್ಯಕ್ಕೆ ಮನ್ನಣೆ ನೀಡುವ ಶಾಲೆಗೆ ಸೇರಿಸಬೇಕು.
3. ಶಾಲೆ ಮತ್ತು ಶಾಲೆಯ ಸುತ್ತ ಮುತ್ತಲಿನ ಪರಿಸರ ಶಾಲೆಯ ಪರಿಸರ ಹೇಗಿದೆ, ಅದರ ಸುತ್ತ ಮುತ್ತಲಿನ ;ಪರಿಸರ ಹೇಗಿದೆ, ಮಕ್ಕಳ ಸುರಕ್ಷತೆಗೆ ಆ ಶಾಲೆಯಲ್ಲಿ ಯಾವೆಲ್ಲಾ ವ್ಯವಸ್ಥೆ ಇದೆ? ಶಾಲಾ ಬಸ್‌ಗಳಲ್ಲಿ ಜಪಿಎಸ್ ಟ್ರಾಕರ್‌ಗಳಿವೆಯೇ, ಮಕ್ಕಳನ್ನು ಸುರಕ್ಷಿತವಾಗಿ ಮನೆಗೆ ತಲುಪಿಸಲು ಯಾವ ವ್ಯವಸ್ಥೆ ಮಾಡಿಕೊಂಡಿದ್ದಾರೆ ಎಂಬುವುದೆಲ್ಲಾ ತಿಳಿಯಿರಿ.
4. ಸಂವಹನ, ಕೌನ್ಸಿಲಿಂಗ್, ಮಾನಸಿಕ ಆರೋಗ್ಯ ನೀವು ಸೇರಿಸುವ ಶಾಲೆಯಲ್ಲಿ ಸಂವಹನ ವ್ಯವಸ್ಥೆ ಹೇಗಿದೆ ಎಂದು ತಿಳಿದುಕೊಳ್ಳಿ. ಕೆಲ ಶಾಲೆಗಳಲ್ಲಿ ತುಂಬಾ ದರ್ಪದಿಂದ ವರ್ತಿಸುತ್ತಾರೆ. ಪೋಷಕರು ಏನಾದರೂ ಹೇಳಲು ಬಂದರೆ ನಿಮಗೆ ಆಗದಿದ್ದರೆ ನಿಮ್ಮ ಮಕ್ಕಳ ಟಿಸಿ ತಗೊಂಡು ಹೋಗಿ ಎಂದು ಹೇಳುತ್ತಾರೆ. ಅಂಥ ಶಾಲೆಯಲ್ಲಿ ಸೇರಿಸಲೇಬೇಡಿ. ನಿಮ್ಮ ಹಾಗೂ ಅವರ ನಡುವೆ ಮುಕ್ತ ಸಂವಹನಕ್ಕೆ ಅವಕಾಶ ನೀಡುವ ಶಾಲೆಯಾಗಿರಬೇಕು. ಅಲ್ಲದೆ ಮಕ್ಕಳ ಮಾನಸಿಕ ಆರೋಗ್ಯದ ಕಡೆ ಗಮನ ನೀಡುವಂಥ ಶಾಲೆಯಾಗಿರಬೇಕು.
5. ವಿದ್ಯಾರ್ಥಿ- ಶಿಕ್ಷಕರ ಅನುಪಾತ ಹಾಗೂ ಶಿಕ್ಷಕರ ಬೋಧನೆಯ ಗುಣಮಟ್ಟ ನೀವು ಸೇರಿಸುವ ಶಾಲೆಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಅನುಪಾತ ಗಮನಿಸಿ. ಸ್ವಲ್ಪ ಮಕ್ಕಳಿರುವ ಕಡೆ ಸೇರಿಸಿದರೆ ಅಥವಾ ತುಂಬಾ ಸೆಕ್ಷನ್ ಇರುವ ಕಡೆ ಸೇರಿಸಿದರೆ ಪ್ರತಿಯೊಂದು ಮಗುವಿನ ಮೇಲೆ ಗಮನ ಹರಿಸಲು ಶಿಕ್ಷಕರಿಗೆ ಸಾಧ್ಯವಾಗುವುದು. ಇನ್ನು ನಿಮ್ಮ ಮಕ್ಕಳಿಗೆ ಯಾವ ರೀತಿಯ ಗುಣ ಮಟ್ಟದ ಶಿಕ್ಷಣ ಸಿಗುತ್ತಿದೆ ಎಂಬುವುದು ಗಮನಿಸಿ. ಕೆಲವು ಶಿಕ್ಷಕರು ತುಂಬಾ ಓದಿರುತ್ತಾರೆ, ಆದರೆ ಅವರ ಬೋಧನೆ ಆಕರ್ಷಕವಾಗಿರುವುದಿಲ್ಲ. ಮಕ್ಕಳನ್ನು ಸೆಳೆಯುವಂತಿರಬೇಕು ಶಿಕ್ಷಕರ ಬೋಧನೆ.
6. ಶಾಲೆಯ ಸಂಸ್ಕೃತಿ ನೀವು ನಿಮ್ಮ ಮಗುವನ್ನು ಕಳುಹಿಸಲು ಬಸಯುವ ಶಾಲೆಯ ಸಂಸ್ಕೃತಿ ತಿಳಿಯಿರಿ, ಅತ್ಯುತ್ತಮ ಬೋಧನೆಯ ತತ್ವಗಳನ್ನು ಅನುಸರಿಸುತ್ತಿದ್ದಾರೆಯೇ ಗಮನಿಸಿ. ಎಲ್ಲಾ ಧರ್ಮಗಳನ್ನು ಸಮಾನವಾಗಿ ಕಾಣುವ ವಾತಾವರಣ ಆ ಶಾಲೆಯಲ್ಲಿ ಇರಬೇಕು.
7. ನಿಮ್ಮ ಆರ್ಥಿಕ ಸ್ಥಿತಿಯ ಪರಿಗಣನೆ ಇದು ತುಂಬಾ ಮುಖ್ಯ. ಮಕ್ಕಳನ್ನು ಒಂದು ಒಳ್ಳೆಯ ಶಾಲೆಯಲ್ಲಿ ಓದಿಸುವ ಆಸೆ ಪ್ರತಿಯೊಬ್ಬ ಪೋಷಕರಲ್ಲಿ ಇರುತ್ತದೆ. ಆದರೆ ಅವರ ಓದು ನಿಮಗೆ ತುಂಬಾ ಭಾರವಾಗಬಾರದು, ಅದರಲ್ಲೂ ಪ್ರಾಥಮಿಕ ಹಂತದಲ್ಲಿ ನೀವು ದುಡಿದ ಅಷ್ಟೂ ದುಡ್ಡನ್ನು ಅವರ ಓದಿಗಾಗಿ ಸುರಿದರೆ ಮುಂದೆ ಒಂದು ಚಿಕ್ಕ ಆರ್ಥಿಕ ಸಮಸ್ಯೆ ಬಂದಾಗ ತುಂಬಾ ಕಷ್ಟವಾಗುವುದು, ಅಲ್ಲದೆ ಉಳಿತಾಯವಿಲ್ಲದಿದ್ದರೆ ಮಕ್ಕಳು ಕಾಲೇಜು, ವೃತ್ತಿಪರ ಕೋರ್ಸ್ ಮಾಡುವಾಗ ಕಷ್ಟವಾಗುವುದು. ಆದ್ದರಿಂದ ಮಕ್ಕಳ ಭವಿಷ್ಯವನ್ನು ಯೋಚಿಸಿ ನಿರ್ಧಾರಕ್ಕೆ ಬನ್ನಿ.