ನವದೆಹಲಿ: ಗೋ ಫಸ್ಟ್ ವಿಮಾನದಲ್ಲಿದ್ದ ವೈದ್ಯರು ಮತ್ತು ಕ್ಯಾಬಿನ್ ಸಿಬ್ಬಂದಿ ವಿಮಾನ ಹಾರಾಟದ ಮಧ್ಯದಲ್ಲಿ ಹೃದಯ ಸ್ತಂಭನದಿಂದ ಬಳಲುತ್ತಿದ್ದ ಪ್ರಯಾಣಿಕರೊಬ್ಬರನ್ನು ರಕ್ಷಿಸಿದ್ದಾರೆ ಎಂದು ವಾಡಿಯಾ ಗ್ರೂಪ್ ಒಡೆತನದ ಏರ್ ಲೈನ್ಸ್ ಇಂದು ಹೇಳಿಕೆಯಲ್ಲಿ ತಿಳಿಸಿದೆ. ವಿಮಾನಯಾನ ಸಂಸ್ಥೆಯು ಕ್ಯಾಬಿನ್ ಸಿಬ್ಬಂದಿಗೆ ನಗದು ಬಹುಮಾನವನ್ನು ನೀಡಿ ಗೌರವಿಸುವುದಾಗಿ ಹೇಳಿದೆ.
ಪ್ರಯಾಣಿಕ ಯೂನಸ್ ರಾಯನ್ ರೋತ್ ಕಣ್ಣೂರಿನಿಂದ ದುಬೈಗೆ ಹೋಗುತ್ತಿದ್ದ ಗೋ ಫಸ್ಟ್ ವಿಮಾನದಲ್ಲಿ ಹೃದಯ ಸ್ತಂಭನಕ್ಕೆ ಒಳಗಾಗಿದ್ದರು ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಪ್ರಯಾಣಿಕ ಸಹಾಯಕ್ಕಾಗಿ ಕೂಗುತ್ತಿದ್ದಂತೆ, ಗೋ ಫಸ್ಟ್ ಕ್ಯಾಬಿನ್ ಸಿಬ್ಬಂದಿ ತಕ್ಷಣ ಪ್ರಯಾಣಿಕನ ಕಡೆಗೆ ಓಡಿ ಹೋಗಿದ್ದು, ನಾಡಿಮಿಡಿತ ಮತ್ತು ಉಸಿರಾಟವಿಲ್ಲದೆ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆತನನ್ನು ನೋಡಿದ್ದಾರೆ. ಕೂಡಲೇ ಒಂದು ಸೆಕೆಂಡ್ ವ್ಯರ್ಥವಾಗದಂತೆ ಪ್ರಯಾಣಿಕರ ಸಹಾಯದಿಂದ ಸಿಬ್ಬಂದಿ ಕಾರ್ಡಿಯೋಪಲ್ಮನರಿ ಪುನರುಜ್ಜೀವನ ಅಥವಾ ಸಿಪಿಆರ್ ಪ್ರಕ್ರಿಯೆ ಆರಂಭಿಸಿದ್ದಾಗಿ ಏರ್ ಲೈನ್ಸ್ ಹೇಳಿದೆ.
ಅದೃಷ್ಟವಶಾತ್ ಡಾಕ್ಟರ್ ಶಬರ್ ಅಹ್ಮದ್ ಕೂಡಾ ಅದೇ ವಿಮಾನದಲ್ಲಿದ್ದರು ಮತ್ತು ಎರಡು ಸೆಟ್ ಸ್ವಯಂ ಚಾಲಿತ ಬಾಹ್ಯ ಡಿಫಿಬ್ರಿಲೇಟರ್ ಶಾಕ್ ಚಿಕಿತ್ಸೆ ನೀಡಿದರು. ನಂತರ ಐದು ಸೆಟ್ ಸಿಪಿಆರ್ ಮಾಡಿದರು. ಕ್ಯಾಬಿನ್ ಸಿಬ್ಬಂದಿಯೊಂದಿಗೆ ವೈದರು ಅವರನ್ನು ಉಳಿಸಿದರು ಎಂದು ಏರ್ ಲೈನ್ಸ್ ಹೇಳಿಕೆಯಲ್ಲಿ ತಿಳಿಸಿದೆ. ವಿಮಾನವು ದುಬೈನಲ್ಲಿ ನಿಗದಿತ ಲ್ಯಾಂಡಿಂಗ್ ಮಾಡಿದ್ದರಿಂದ ರಾಯನ್ ರೋತ್ ಅವರನ್ನು ಅಂತಿಮವಾಗಿ ಗಾಲಿಕುರ್ಚಿಯಲ್ಲಿ ಇಳಿಸಲಾಯಿತು ಎಂದು ಏರ್ ಲೈನ್ಸ್ ತಿಳಿಸಿದೆ.