ನವದೆಹಲಿ: ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಅತಿಕ್ರಮಣ ವಿರೋಧಿ ಅಭಿಯಾನವನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟೀಕಿಸಿದ್ದಾರೆ. ದೆಹಲಿಯಲ್ಲಿ ಅಕ್ರಮವೆಂದು ಪರಿಗಣಿಸಲಾದ 63 ಲಕ್ಷ ಜನರ ಅಂಗಡಿಗಳು ಮತ್ತು ಮನೆಗಳನ್ನು ಬುಲ್ಡೋಜರ್‌ಗಳು ನೆಲಸಮಗೊಳಿಸಿದರೆ ಅದು ಸ್ವತಂತ್ರ ಭಾರತದ 'ದೊಡ್ಡ ವಿನಾಶ ಎಂದು ಬಣ್ಣಿಸಿದ್ದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಈ ವಿಷಯದ ಕುರಿತು ಆಮ್ ಆದ್ಮಿ ಪಕ್ಷದ ಶಾಸಕರೊಂದಿಗಿನ ಸಭೆಯಲ್ಲಿ ಮಾತನಾಡಿದ ಅರವಿಂದ ಕೇಜ್ರಿವಾಲ್ ಅವರು ದೆಹಲಿಯ ವಿವಿಧ ಭಾಗಗಳಲ್ಲಿ ಬಿಜೆಪಿ ನೇತೃತ್ವದ ಮುನ್ಸಿಪಲ್ ಕಾರ್ಪೊರೇಷನ್‌ಗಳು ನಡೆಸುತ್ತಿರುವ ಅತಿಕ್ರಮಣ ವಿರೋಧಿ ಅಭಿಯಾನವನ್ನು ವಿರೋಧಿಸಿ ಜೈಲಿಗೆ ಹೋಗಲು ಸಿದ್ಧರಾಗಿರಬೇಕು ಎಂದು ಶಾಸಕರಿಗೆ ಕರೆ ನೀಡಿದರು.
ಬುಲ್ಡೋಜರ್‌ಗಳೊಂದಿಗೆ ಕಾಲೋನಿಗಳಿಗೆ ನುಗ್ಗಿ ಅಂಗಡಿ ಮತ್ತು ಮನೆಯನ್ನು ಧ್ವಂಸ ಮಾಡುತ್ತಿದ್ದಾರೆ. ಇವುಗಳು ಅಕ್ರಮ ಕಟ್ಟಡಗಳಲ್ಲ ಎಂದು ಸಾಬೀತುಪಡಿಸಲು ಜನ ಕಾಗದ ಪತ್ರಗಳನ್ನು ತೋರಿಸಿದರೂ ಅವರು ಅವುಗಳನ್ನು ಪರಿಶೀಲಿಸುವುದಿಲ್ಲ ಎಂದು ದೂಷಿಸಿದರು.
'ದೆಹಲಿಯನ್ನು ಯೋಜಿತ ರೀತಿಯಲ್ಲಿ ಮಾಡಲಾಗಿಲ್ಲ. ದೆಹಲಿಯ ಶೇಕಡಾ 80 ಕ್ಕಿಂತ ಹೆಚ್ಚು ಪ್ರದೇಶವನ್ನು ಅಕ್ರಮ ಮತ್ತು ಅತಿಕ್ರಮಣ ಎಂದು ಕರೆಯಬಹುದು. ಅಂದರೆ ನೀವು ದೆಹಲಿಯ ಶೇಕಡಾ 80 ಭಾಗವನ್ನು ನಾಶ ನಾಶಪಡಿಸುತ್ತೀರ? ಎಂದು ಆನ್‌ಲೈನ್ ಮೀಟಿಂಗ್ ನಲ್ಲಿ ಕಿಡಿಕಾರಿದರು. ಅತಿಕ್ರಮಣ ವಿರೋಧಿ ಆಂದೋಲನ ನಡೆಸುತ್ತಿರುವ ರೀತಿಗೆ ಎಎಪಿ ಪಕ್ಷದ ವಿರೋಧವಿದೆ ಎಂದು ಅವರು ಹೇಳಿದರು.
ಕಳೆದ 15 ವರ್ಷಗಳಲ್ಲಿ ಬಿಜೆಪಿ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ನ ಅಧಿಕಾರದಲ್ಲಿತ್ತು. ಹಣ ತೆಗೆದುಕೊಂಡು ಅಕ್ರಮ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಿದೆ. ಅವರ ಅಧಿಕಾರಾವಧಿ ಮೇ 18ಕ್ಕೆ ಕೊನೆಗೊಳ್ಳಲಿದೆ. ಆದರೆ ಈಗ ಅಂತಹ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಂವಿಧಾನಿಕ ಶಕ್ತಿ ನಿಮಗೆ ಇದೆಯೇ? ಚುನಾವಣೆ ನಡೆಯಲಿ. ಎಮ್‌ಸಿಡಿಯಲ್ಲಿ ಎಎಪಿ ಅಧಿಕಾರಕ್ಕೆ ಬರಲಿದೆ ಎಂಬುದು ಎಲ್ಲರಿಗೂ ತಿಳಿದಿದೆ ಎಂದು ಅವರು ಹೇಳಿದರು.
ಮುನ್ಸಿಪಲ್ ಕಾರ್ಪೊರೇಷನ್ ನಲ್ಲಿ ಎಎಪಿ ಅಧಿಕಾರಕ್ಕೆ ಬಂದ ಮೇಲೆ ಅತಿಕ್ರಮಣ ಸಮಸ್ಯೆಯನ್ನು ಪರಿಹರಿಸಲಾಗುತ್ತದೆ ಮತ್ತು ಅನಧಿಕೃತ ಕಾಲೋನಿಗಳಲ್ಲಿ ವಾಸಿಸುವ ಜನರು ಮಾಲೀಕತ್ವದ ಹಕ್ಕುಗಳನ್ನು ಪಡೆಯುತ್ತಾರೆ ಎಂದು ಅವರು ಜನರಿಗೆ ಭರವಸೆ ನೀಡಿದರು.