ವಾಷಿಂಗ್ ಟನ್: ಕೊರೋನಾ ಬಂದ ನಂತರದ ದಿನಗಳಲ್ಲಿ ಉದ್ಯೋಗಕ್ಕೆ ಸಂಬಂಧಿಸಿದಂತೆ ಹಲವು ಸಮಸ್ಯೆಗಳು ಎದುರಾಗಿವೆ.
ಕೊರೋನಾ ಕಾಲದಲ್ಲಿ ನೆಲಕಚ್ಚಿದ್ದ ಹಲವು ಉದ್ದಿಮೆಗಳು ಸಾಂಕ್ರಾಮಿಕದ ಬಳಿಕ ಪುಟಿದೇಳಲು ಹರಸಾಹಸಪಡುತ್ತಿದ್ದರೆ ಅಮೆರಿಕಾದಲ್ಲಿ ನೌಕರರನ್ನು ಹಣದುಬ್ಬರ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ ಎನ್ನುತ್ತಿದೆ ಸಿಎನ್ಎನ್ ವರದಿ!
ಸತತ 2 ವರ್ಷಗಳ ಕಾಲ ಮನೆಯಿಂದಲೇ ಕಾರ್ಯನಿರ್ವಹಿಸುತ್ತಿದ್ದ ನೌಕರರಿಗೆ ಈಗ ಕಚೇರಿಗೆ ತೆರಳಬೇಕಿರುವುದು ಅನಿವಾರ್ಯವಾಗಿದ್ದು, ಆದರೆ ಏರುಗತಿಯಲ್ಲಿರುವ ಹಣದುಬ್ಬರದ ಪರಿಣಾಮ ನೌಕರರ ಜೇಬಿಗೆ ಕತ್ತರಿ ಬಿಳುತ್ತಿದ್ದು, ಬರುತ್ತಿರುವ ವೇತನ ದೈನದಿಂದ ಖರ್ಚುಗಳನ್ನು ನಿಭಾಯಿಸುವುದಕ್ಕೆ ತೀರಾ ಕಡಿಮೆಯಾಗಿದೆ.
ಆಹಾರ, ಪ್ರಯಾಣದ ವೆಚ್ಚ, ಇಂಧನ ಬೆಲೆ ಏರಿಕೆ, ಗ್ಯಾಸ್ ಬೆಲೆ ಏರಿಕೆಗಳ ಪರಿಣಾಮ "ಸಂಬಳ ಸಾಲುತ್ತಿಲ್ಲ" ಎಂಬುದು ಬಹುತೇಕ ಮಂದಿಯ ಸಮಸ್ಯೆಯಾಗಿದ್ದು, ಕಚೇರಿಗೆ ಬರುವುದೇ ದುಸ್ತರವಾಗಿದೆ ಎನ್ನುತ್ತಿದ್ದಾರೆ.
ಅಲ್ಲಿನ ಕಾರ್ಮಿಕ ಇಲಾಖೆಯ ಪ್ರಕಾರ ಆಹಾರದ ಬೆಲೆ ಏಪ್ರಿಲ್ ನಲ್ಲಿ ಶೇ.9.4 ರಷ್ಟು ಏರಿಕೆಯಾಗಿದ್ದು, ಇದು 1981 ರ ಬಳಿಕ ಎದುರಾಗುತ್ತಿರುವ ಗರಿಷ್ಠ ಬೆಲೆ ಏರಿಕೆಯಾಗಿದೆಯಂತೆ, ಏಪ್ರಿಲ್ ನಲ್ಲಿ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ದಿನಸಿ ಬೆಲೆಗಳು ಶೇ.10.8 ರಷ್ಟು ಏರಿಕೆಯಾಗಿದೆ. ಪರಿಣಾಮ ಬೆಳಿಗ್ಗೆ ಸೇವಿಸುವ ಕಾಫಿಯಿಂದ ಹಿಡಿದು ಉಪಹಾರ, ಮಧ್ಯಾಹ್ನದ ಊಟದವರೆಗೂ ಪ್ರತಿಯೊಂದರ ಬೆಲೆಯೂ ಏರಿಕೆಯಾಗುತ್ತಿರುವುದು ನೌಕರರು ಪರದಾಡುವಂತಾಗಿದೆ.
ನೌಕರರ ಈ ಪರಿಸ್ಥಿತಿ ಲಂಚ್ಫ್ಲೇಷನ್ (ಹಣದುಬ್ಬರದ ರೀತಿಯಲ್ಲಿನ ಶಬ್ದ) ಎಂದೇ ಪ್ರಚಾರ ಪಡೆದುಕೊಳ್ಳುತ್ತಿದೆ.