ನವದೆಹಲಿ: ಹೈಕೋರ್ಟ್ ಗಳಲ್ಲಿ ಬಾಕಿ ಇರುವ ಕ್ರಿಮಿನಲ್ ಪ್ರಕರಣಗಳ ಮೇಲ್ಮನವಿ ಅರ್ಜಿಗಳ ಬಗ್ಗೆ ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದ್ದು, ಈ ವಿಷಯವಾಗಿ ವರದಿಯನ್ನು ಕೇಳಿದೆ.
ನ್ಯಾ.ಎಲ್ ನಾಗೇಶ್ವರ್ ರಾವ್ ಹಾಗೂ ಬಿಆರ್ ಗವಾಯಿ ಅವರಿದ್ದ ಪೀಠ, ಉತ್ತರ ಪ್ರದೇಶ, ರಾಜಸ್ಥಾನ್, ಮಧ್ಯಪ್ರದೇಶ, ಬಿಹಾರ, ಬಾಂಬೆ, ಒಡಿಶಾ ಹೈಕೋರ್ಟ್ ಗಳಿಂದ ವರದಿ ಕೇಳಿದೆ.
ಬಾಕಿ ಇರುವ ಮೇಲ್ಮನವಿ ಅರ್ಜಿಗಳು, ಆರ್ಟಿಕಲ್ 21 ರ ಅಡಿಯಲ್ಲಿ ತ್ವರಿತ ವಿಚಾರಣೆಯ ಹಕ್ಕನ್ನು ಬಾಧಿಸಲಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆಎಂ ನಟರಾಜ್ ಅವರಿಗೆ ಈ ವಿಷಯವಾಗಿ ಸಹಕರಿಸಲು ಸೂಚಿಸಿದೆ.
ವಿಚಾರಣೆ ವೇಳೆ ಅಲ್ಲಹಾಬಾದ್ ಹೈಕೋರ್ಟ್ ನಲ್ಲಿ 1980 ರಿಂದಲೂ ಕ್ರಿಮಿನಲ್ ಅಪೀಲ್ ಗಳು ಬಾಕಿ ಇವೆ ಎಂಬ ಮಾಹಿತಿ ಸುಪ್ರೀಂ ಕೋರ್ಟ್ ಗಮನಕ್ಕೆ ಬಂದಿತು. ಈ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಕೋರ್ಟ್, ಆರೋಪ ಎದುರಿಸುತ್ತಿರುವ ವ್ಯಕ್ತಿ 1970 ರಲ್ಲಿ ಅಪರಾಧ ಎಸಗಿರಬಹುದು ವಿಚಾರಣಾಧೀನ ನ್ಯಾಯಾಲಯದಲ್ಲಿ ವಿಚಾರಣೆ 5-6 ವರ್ಷಗಳಲ್ಲಿ ಮುಕ್ತಾಯಗೊಂಡು 1980 ರಲ್ಲಿ ಆತ ಹೈಕೋರ್ಟ್ ಮೊರೆ ಹೋಗಿದ್ದಾನೆ. ಆಗ ಆತನ ವಯಸ್ಸು 40 ವರ್ಷಗಳಾಗಿದ್ದರೆ ಈಗ 80 ವರ್ಶಗಳಾಗಿರುತ್ತವೆ ಎಂದು ಕೋರ್ಟ್ ಹೇಳಿದೆ.
ಸೆಕ್ಷನ್ 302 ಅಡಿಯಲ್ಲಿ (ಹತ್ಯೆ) ಆರೋಪ ಎದುರಿಸುತ್ತಿದ್ದ ವ್ಯಕ್ತಿಗೆ ವಿಚಾರಣಾಧೀನ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿದ್ದ ಮೇಲ್ಮನವಿ ಅರ್ಜಿ ಅಲ್ಲಾಹಾಬಾದ್ ಹೈಕೋರ್ಟ್ ನಲ್ಲಿ ಕೆಲವು ಸಮಯದಿಂದ ಬಾಕಿ ಉಳಿದಿತ್ತು, ಆತ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ವೇಳೆಗೆ 3 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಎದುರಿಸಿದ್ದಾನೆ.