ಜೋಧ್ ಪುರ: ಈದ್–ಉಲ್–ಫಿತ್ರ್ ಆಚರಣೆಗೂ ಮುನ್ನ, ರಾಜಸ್ಥಾನದ ಜೋಧಪುರದಲ್ಲಿ ಮಂಗಳವಾರ ಕೋಮು ಗಲಭೆ ಸಂಭವಿಸಿದ ಪರಿಣಾಮ ನಗರದ 10 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬುಧವಾರ ಮಧ್ಯರಾತ್ರಿ ವರೆಗೆ ಕರ್ಫ್ಯೂ ಜಾರಿಗೊಳಿಸಲಾಗಿದೆ.
ಮೂಲಗಳ ಪ್ರಕಾರ ನಗರದ ಜಾಲೋರಿ ವೃತ್ತದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಬಾಲಮುಕುಂದ ಬಿಸ್ಸಾ ಅವರ ಪ್ರತಿಮೆ ಇದ್ದು, ಈದ್ ಅಂಗವಾಗಿ ಮುಸ್ಲಿಮರು ಸೋಮವಾರ ರಾತ್ರಿ ಪ್ರತಿಮೆ ಪಕ್ಕ ಈದ್ ಧ್ವಜಗಳನ್ನು ಅಳವಡಿಸಿದ್ದು ಘರ್ಷಣೆ ಹಾಗೂ ಕಲ್ಲು ತೂರಾಟಕ್ಕೆ ಕಾರಣವಾಯಿತು ಎನ್ನಲಾಗಿದೆ. ಈ ಹಿಂದೆ ‘ಪರಶುರಾಮ ಜಯಂತಿ ಅಂಗವಾಗಿ ಬಿಸ್ಸಾ ಪ್ರತಿಮೆ ಬಳಿ ಕೇಸರಿ ಧ್ವಜಗಳನ್ನು ಅಳವಡಿಸಲಾಗಿತ್ತು. ಅವುಗಳನ್ನು ತೆಗೆದುಹಾಕಲಾಗಿದೆ’ ಎಂದು ಹಿಂದೂ ಪರ ಸಂಘಟನೆಗಳು ಆರೋಪಿಸಿವೆ.
ಧ್ವಜದ ವಿಚಾರವಾಗಿಯೇ ಸೋಮವಾರ ರಾತ್ರಿ ಕಲ್ಲು ತೂರಾಟ ಹಾಗೂ ಘರ್ಷಣೆ ಸಂಭವಿಸಿತು. ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿ, ಪರಿಸ್ಥಿತಿಯನ್ನು ನಿಯಂತ್ರಲು ಕ್ರಮ ಕೈಗೊಂಡರು. ಅಶ್ರುವಾಯು ಸಿಡಿಸಿ ಗುಂಪನ್ನು ಚದುರಿಸಿದ್ದರು. ಈ ಸಂದರ್ಭದಲ್ಲಿ ಐವರು ಪೊಲೀಸರಿಗೆ ಗಾಯಗಳಾಗಿವೆ’ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಗಲಭೆ ಬೆನ್ನಲ್ಲೇ, ನಗರದಲ್ಲಿ ಭಾರಿ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಪರಿಸ್ಥಿತಿ ಹತೋಟಿಯಲ್ಲಿದೆ. ವದಂತಿಗಳು ಹಬ್ಬುವುದನ್ನು ತಡೆಯುವ ಸಲುವಾಗಿ ನಗರದ ಕೆಲ ಭಾಗಗಳಲ್ಲಿ ಇಂಟರ್‌ನೆಟ್ ಸೇವೆಯನ್ನು ಸ್ಥಗಿತಗೊಳಿಸಿ ಜೋಧಪುರ ಡಿಸಿಪಿ ಆದೇಶಿಸಿದ್ದಾರೆ.
ಪೊಲೀಸ್ ನಿಯಂತ್ರಣ ಕೊಠಡಿ ಪ್ರಕಾರ, ಉದಯ್ ಮಂದಿರ, ನಾಗೋರಿ ಗೇಟ್, ಖಾಂಡಾ ಫಾಲ್ಸಾ, ಪ್ರತಾಪ್ ನಗರ, ದೇವ್ ನಗರ, ಸೂರ್ ಸಾಗರ್ ಮತ್ತು ಸರ್ದಾರ್‌ಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮೇ 4 ಮಧ್ಯರಾತ್ರಿಯವರೆಗೆ ಕರ್ಫ್ಯೂ ವಿಧಿಸಲಾಗಿದೆ.
ಮಂಗಳವಾರ ಈದ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ ನೆರವೇರಿದ ಬಳಿಕ ಮತ್ತೆ ಗಲಭೆ ಶುರುವಾಗಿ, ಕೆಲವರು ಜಾಲೋರಿ ಗೇಟ್ ಸಮೀಪ ಕಲ್ಲು ತೂರಾಟ ನಡೆಸಿದರು. ಈ ವೇಳೆ ಅಂಗಡಿಗಳು, ವಾಹನಗಳು ಹಾಗೂ ಮನೆಗಳ ಮೇಲೂ ಕಲ್ಲುಗಳನ್ನು ತೂರಲಾಗಿದೆ. ಈ ವೇಳೆ ಮಧ್ಯ ಪ್ರವೇಶಿಸಿದ ಪೊಲೀಸರು ಲಾಠಿ ಪ್ರಹಾರ ನಡೆಸಿ ಪೊಲೀಸರು ಉದ್ರಿಕ್ತರನ್ನು ಚದುರಿಸಿ, ಕೆಲವರನ್ನು ವಶಕ್ಕೆ ತೆಗೆದುಕೊಂಡರು.
ಜೋಧಪುರ ಗಲಭೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪ್ರತಿಕ್ರಿಯೆ ನೀಡಿದ್ದು, ತಮ್ಮದೇ ತವರಾದ ಜೋಧ್ ಪುರದಲ್ಲಿ ಕೋಮುಗಲಭೆ ಸಂಭವಿಸಿರುವುದು ಅಘಾತ ತಂದಿದೆ. ಶಾಂತಿ ಕಾಪಾಡುವಂತೆ ಅವರು ಜನರಲ್ಲಿ ಮನವಿ ಮಾಡಿದ್ದಾರೆ.