ಕಾಸರಗೋಡು: ಜಿಲ್ಲೆಯ ಚೆರ್ವತ್ತೂರಿನ ತಂಪು ಪಾನೀಯ ಅಂಗಡಿಯೊಂದರಿಂದ ಚಿಕನ್ ಶವರ್ಮ ಸೇವಿಸಿ ಅಸೌಖ್ಯಗೊಂಡವರಲ್ಲಿ ಮೂವರು ವಿದ್ಯಾರ್ಥಿಗಳ ಸ್ಥಿತಿ ಗಂಭೀರವಾಗಿದ್ದು, ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯ ತುರ್ತು ನಿಗಾ ವಿಭಾಗಕ್ಕೆ ದಾಖಲಿಸಲಾಗಿದೆ. ಶವರ್ಮ ಸೇವಿಸಿ ಅಸೌಖ್ಯಗೊಂಡಿರುವ ವಿದ್ಯಾರ್ಥಿಗಳ ಚಿಕಿತ್ಸೆಗಾಗಿ ವೈದ್ಯಕೀಯ ಕಾಲೇಜು ಸೂಪರಿಂಟೆಂಡೆಂಟ್ ಸೇರಿದಂತೆ ಐದು ಮಂದಿ ತಜ್ಞ ವೈದ್ಯರ ಪ್ರತ್ಯೇಕ ಮೆಡಿಕಲ್ ಬೋರ್ಡ್ ರಚಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಕೂಲ್‍ಬಾರ್ ನಡೆಸುತ್ತಿರುವ ಉಳ್ಳಾಲ ನಿವಾಸಿ ಅನಸ್ ಹಾಗೂ ಆಹಾರ ಪದಾರ್ಥ ತಯಾರಿಸುತ್ತಿದ್ದ ನೇಪಾಳ ನಿವಾಸಿ, ಸಂದೇಶ್ ರಾಯ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ವಿದೇಶದಲ್ಲಿರುವ ಕೂಲ್‍ಬಾರ್ ಮಾಲಿಕ, ಕಾಲಿಕ್ಕಡವು ಪಿಲಾವಳಪ್ಪು ನಿವಾಸಿ ಕುಞಹಮ್ಮದ್ ಬಗ್ಗೆ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವೈಭವ್ ಸಕ್ಸೇನಾ ತಿಳಿಸಿದ್ದಾರೆ. ಉದ್ದೇಶಪೂರ್ವಕವಲ್ಲದ ನರಹತ್ಯೆ ಸೇರಿದಂತೆ ವಿವಿಧ ಕಾಲಂ ಪ್ರಕಾರ ಚಂದೇರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಈ ಮಧ್ಯೆ ಶವರ್ಮ ಸೇವಿಸಿ ಮೃತಪಟ್ಟ ದೇವನಂದ(16)ಳ ಮೃತದೇಹ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಶವಮಹಜರು ನಡೆಸಿದ ನಂತರ ಆಕೆ ಕಲಿಯುತ್ತಿದ್ದ ಶಾಲೆಯಲ್ಲಿ ಅಂತಿಮದರ್ಶನಕ್ಕಿರಿಸಿದ ನಂತರ ಅಂತ್ಯ ಸಂಸ್ಕಾರ ವೆಳ್ಳೂರಿನಲ್ಲಿ ನಡೆಸಲಾಯಿತು.
ಶವರ್ಮ ಸೇವಿಸಿದ ವಿದ್ಯಾರ್ಥಿನಿ ಮೃತಪಟ್ಟು, ಇತರ ಹಲವು ಮಂದಿ ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ಕೇರಳ ರಾಜ್ಯಾದ್ಯಂತ ಆಹಾರ ಸುರಕ್ಷಾ ವಿಭಾಗ ತಪಾಸಣೆ ಚುರುಕುಗೊಳಿಸಿದೆ. ಮುಖ್ಯವಾಗಿ ಶವರ್ಮ ಮಾರಾಟಕೇಂದ್ರಗಳನ್ನು ಕೇಂದ್ರೀಕರಿಸಿ ತಪಾಸಣೆ ನಡೆಸಲು ರಾಜ್ಯ ಆಹಾರ ಸುರಕ್ಷಾ ಆಯುಕ್ತ ವಿ.ಆರ್. ವಿನೋದ್ ಅದೇಶ ನೀಡಿದ್ದಾರೆ. ಶವರ್ಮ ಮಾರಾಟಕೇಂದ್ರದ ಶುಚಿತ್ವ, ಬಳಸುವ ಮಾಂಸ, ಪರವಾನಗಿಯೊಂದಿಗೆ ನಡೆಯುತ್ತಿರುವ ಬಗ್ಗೆ ಖಚಿತಪಡಿಸಿಕೊಳ್ಳುವಂತೆಯೂ ಸೂಚಿಸಲಾಗಿದೆ. ಶವರ್ಮ ಸೇವಿಸಿದವರಲ್ಲಿ ವಿದ್ಯಾರ್ಥಿಗಳು ಸೇರಿದಂತೆ 30ಕ್ಕೂ ಹೆಚ್ಚುಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.