ತಿರುವನಂತಪುರ: ಕಳೆದ ವರ್ಷ ಸಂಭವಿಸಿದ ಪ್ರವಾಹದಲ್ಲಿ ಅಪಾಯಕಾರಿಯಾಗಿ ಕೆಎಸ್‌ಆರ್‌ಟಿಸಿ ಬಸ್ ಚಲಾಯಿಸಿದ್ದಕ್ಕಾಗಿ ಅಮಾನತುಗೊಂಡಿದ್ದ ನೌಕರನನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ. ಎಂಟು ತಿಂಗಳ ಅಮಾನತು ಬಳಿಕ ಕೆಎಸ್‌ಆರ್‌ಟಿಸಿ ಎರಟ್ಟುಪೆಟ್ಟಾ ಡಿಪೋದ ಜಯದೀಪ್ ಎಸ್ ಅವರು ಕರ್ತವ್ಯಕ್ಕೆ ಮರಳಿದ್ದಾರೆ. ಶಿಸ್ತು ಕ್ರಮದ ಹಿನ್ನೆಲೆಯಲ್ಲಿ ಅವರನ್ನು ಗುರುವಾಯೂರಿಗೆ ಸ್ಥಳಾಂತರಿಸಲಾಗಿದೆ.
ಜಯದೀಪ್ ಅವರು ತನ್ನನ್ನು ಸಾರಿಗೆ ಸಚಿವರು ಅಮಾನತುಗೊಳಿಸಿರುವುದನ್ನು ಟೀಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಪೋಸ್ಟ್ ಮಾಡಿ ವಿವಾದಕ್ಕೀಡಾಗಿದ್ದರು. ಜಯದೀಪ್ ಅವರು ತಬಲಾ ಬಾರಿಸುವ ಮೂಲಕ ತಮ್ಮ ಅಮಾನತ್ತನ್ನು ಸಂಭ್ರಮಿಸಿದ್ದರು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಈ ಘಟನೆ ನಡೆದಿತ್ತು. ಭಾರೀ ಮಳೆಯ ಹಿನ್ನೆಲೆಯಲ್ಲಿ ಜಯದೀಪ್ ಅವರ ಬಸ್ ಪೂಂಜಾರಿನ ಸೇಂಟ್ ಮೇರಿ ಚರ್ಚ್ ಮುಂಭಾಗದ ಪ್ರವಾಹದ ಮೂಲಕ ಚಲಿಸುತ್ತಿತ್ತು.
ಪ್ರಯಾಣಿಕರ ಜೀವಕ್ಕೆ ಬೆದರಿಕೆಯಾಗಿ ಬಸ್ ಚಲಾಯಿಸಿದ ಹಾಗೂ ಬಸ್ ಗೆ ಹಾನಿ ಮಾಡಿದ ಆರೋಪದ ಮೇಲೆ ಜಯದೀಪ್ ವಿರುದ್ಧ ಕ್ರಮ ಕೈಗೊಳ್ಳಲಾಗಿತ್ತು. ಸಾರಿಗೆ ಸಚಿವ ಆಂಟನಿ ರಾಜು ಅವರ ಸೂಚನೆ ಮೇರೆಗೆ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರು ಅಕ್ಟೋಬರ್ 16 ರಂದು ಅಮಾನತುಗೊಳಿಸಿದ್ದರು. ಪ್ರವಾಹದಲ್ಲಿ ಮುಕ್ಕಾಲು ಭಾಗ ಮುಳುಗಿದ್ದ ಬಸ್ಸಿನಿಂದ ಪ್ರಯಾಣಿಕರನ್ನು ಸ್ಥಳೀಯರು ರಕ್ಷಿಸಿದ್ದರು.