ಕುಂಬಳೆ: ಸಹಸ್ರ ಶತಮಾನದ ಪರಂಪರೆಯಿರುವ ಸನಾತನ ಸಂಸ್ಕೃತಿಯ ಹಿಂದುತ್ವದ ಸತ್ಸಂಪ್ರದಾಯಗಳನ್ನು, ಆರಾಧನೆಯನ್ನು ಕಡೆಗಣಿಸಿದರೆ ಲೋಕಕ್ಕೆ ದುರ್ಭಿಕ್ಷೆ ಉಂಟಾಗಬಲ್ಲುದು. ಈಗಿನ ಕೆಲವು ರೀತಿ ನೀತಿಗಳೇ ಸ್ವತಃ ಇದನ್ನು ಸ್ಷಷ್ಟಪಡಿಸುತ್ತದೆ. ದೇವತಾ ಆರಾಧನೆ, ವರ್ಷಂಪ್ರತಿ ಅದರ ಆಚರಣೆ ಹಾಗೂ ಉತ್ಸವಾದಿ ಸಂಭ್ರಮಗಳು ಮಾನವನ ಭಕ್ತಿಯ ಜತೆಗೆ ಮನದ ಧೀಶಕ್ತಿಗೆ ಪುನಶ್ಚೇತನ ನೀಡುವಂತದ್ದಾಗಿದೆ. ಆದ್ದರಿಂದ ನಾವೆಲ್ಲ ಈ ಮಹತ್ಕಾರ್ಯದಲ್ಲಿ ಸಂಘರ್ಷವಿಲ್ಲದೆ ಪಾಲ್ಹೊಳ್ಳುವುದರಿಂದ ಭಗವತ್ ಪ್ರೀತಿಗೆ ಕಾರಣೀಭೂತರಾಗುತ್ತೇವೆ ಎಂದು ವೇದಮೂರ್ತಿ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರ ನುಡಿದರು.
ಅವರು ಕುದ್ರೆಪ್ಪಾಡಿ ಶ್ರೀಸುಬ್ರಹ್ಮಣ್ಯ ಕ್ಷೇತ್ರದ ದ್ವಿತೀಯ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ
ಧಾರ್ಮಿಕ ಭಾಷಣಗೈದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ವಸಂತ ಪೈ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಭಗವಂತನಿಗೆ ತನ್ನ ಕೈಯಲ್ಲಿ ಇರುವುದನ್ನು ಕೃತಜ್ಞತಾ ಪೂರ್ವಕವಾಗಿ ನೀಡಿದಾಗ ಭಕ್ತಿಗೆ ಒಲಿಯುತ್ತಾನೆ. ಆದರೆ ಹಣ ಅಂತಸ್ತು ಉಂಟೆಂದು ಅಹಂಕಾರ ಸಲ್ಲದು. ದೇವರು ನಮ್ಮಲ್ಲಿ ಏನು ಕೇಳಲಾರ ಆದರೆ ನೀಡುವಲ್ಲಿ ಹಿಂಜರಿಯಲಾರ ಶ್ರದ್ಧಾ ಭಕ್ತಿ ಪ್ರೀತಿ ಪರಸ್ಪರ ಪ್ರತಿಯೋರ್ವರಲ್ಲಿಯೂ ಐಕ್ಯವಾಗಿರಲಿ ಎಂದರು.
ಕಟೀಲು ಕ್ಷೇತ್ರದ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಲಕ್ಷ್ಮೀನಾರಾಯಣ ಆಸ್ರಣ್ಣ ಗೌರವ ಉಪಸ್ಥಿತಿ ವಹಿಸಿ ಆಶೀರ್ವಚನಗೈಯುತ್ತಾ ದೇವರು ನಮಿಗೆ ನೀಡಿದ್ದನ್ನು ಪುನಃ ದೇವರಿಗೆ ಭಕ್ತಿಯಿಂದ ಸಮರ್ಪಿಸಿದರೆ ಮಾತ್ರ ಮತ್ತೊಂದು ಲೋಕದಲ್ಲಿ ಸ್ವರ್ಗ ಸಮಾನ ಸುಖ ಲಭಿಸಲು ಸಾಧ್ಯವಿದೆ ಎಂದರು.
ಮಧೂರು ಕ್ಷೇತ್ರದ ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಜಯದೇವ ಖಂಡಿಗೆ, ವೇದಮೂರ್ತಿ ನಾರಾಯಣ ರಂಗಭಟ್ ಮಧೂರು, ಪುರೋಹಿತ ರತ್ನ ಕೇಶವ ಆಚಾರ್ಯ ಉಳಿಯತ್ತಡ್ಕ , ಡಿ ದಾಮೋದರ ದೇಲಂಪಾಡಿ, ವಾಸುದೇವ ಕೊಳ್ಳ ಎಲ್ಲಂಗಳ ಮಧೂರು,ಡಾ.ಹರಿ ಕಿರಣ್ ಬಂಗೇರ ಕಾಸರಗೋಡು, ಮಹಾಬಲ ರೈ ಕಾಳ್ಯಂಗಾಡು ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಡಿ ಸರ್ವೇಶ್ ಕುಮಾರ್ ಭಟ್ ಸ್ವಾಗತಿಸಿ ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಎಚ್.ಎಂ. ಪರಮೇಶ್ವರ ಹೆಬ್ಬಾರ್ ಕುದ್ರೆಪ್ಪಾಡಿ ವಂದಿಸಿದರು.