ರಾಂಚಿ: ಮನಿ ಲಾಂಡರಿಂಗ್ ಪ್ರಕರಣದಲ್ಲಿ ಇತರ ಆರೋಪಗಳ ಜೊತೆಗೆ ನರೇಗಾ ನಿಧಿಯನ್ನು ದುರುಪಯೋಗಪಡಿಸಿಕೊಂಡ ಆರೋಪದಲ್ಲಿ ಜಾರ್ಖಂಡ್ ಗಣಿ ಕಾರ್ಯದರ್ಶಿ ಪೂಜಾ ಸಿಂಘಾಲ್ ಅವರನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿದೆ.
15 ಗಂಟೆಗಳ ಕಾಲ ಸುದೀರ್ಘ ವಿಚಾರಣೆಯ ಬಳಿಕ ಅಂತಿಮವಾಗಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು 2000 ಬ್ಯಾಚ್‌ನ ಐಎಎಸ್ ಅಧಿಕಾರಿ ಪೂಜಾ ಸಿಂಘಾಲ್ ರನ್ನು ಪಿಎಂಎಲ್ಎ ಸೆಕ್ಷನ್ ಅಡಿಯಲ್ಲಿ ಬಂಧಿಸಿದೆ. ಪೂಜಾ ಸಿಂಘಾಲ್‌ಗೆ ಸಂಬಂಧಿಸಿದ ಚಾರ್ಟರ್ಡ್ ಅಕೌಂಟೆಂಟ್ ಸುಮನ್ ಕುಮಾರ್ ಅವರನ್ನು ಮೂರು ದಿನಗಳ ಹಿಂದೆ ಬಂಧಿಸಲಾಗಿತ್ತು.
ವಿಚಾರಣೆಯ ಎರಡನೇ ದಿನದಂದು ಸಿಂಘಾಲ್ ಅವರನ್ನು ಬಂಧಿಸಲಾಗಿದೆ. ವಿಚಾರಣೆ ಸಮಯದಲ್ಲಿ ಇಡಿ ಕೇಳಿದ ಪ್ರಶ್ನೆಗಳಿಗೆ ಪೂಜಾ ಹಾರಿಕೆ ಉತ್ತರ ನೀಡಿದ್ದರಿಂದ ಆಕೆಯನ್ನು ಬಂಧಿಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಪೂಜಾರ ಪತಿ ಅಭಿಷೇಕ್ ಝಾ ಅವರಿಗೆ ಸಮನ್ಸ್ ನೀಡಿದ್ದು ಇಡಿ ಕಚೇರಿಗೆ ಆಗಮಿಸಿದ ಒಂದು ಗಂಟೆಯ ನಂತರ ಅವರನ್ನು ಅಧಿಕೃತವಾಗಿ ಬಂಧಿಸಲಾಗಿದೆ.
ಮೇ 6ರಂದು ಪೂಜಾ ಸಿಂಘಾಲ್ ಮತ್ತು ಉದ್ಯಮಿಯಾಗಿರುವ ಪೂಜಾ ಅವರ ಪತಿ ಅಭಿಷೇಕ್ ಝಾ ಮತ್ತಿತರರಿಗೆ ಸಂಬಂಧಿಸಿದ ವಿವಿಧ ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಸುಮಾರು 19.31 ಕೋಟಿ ರೂಪಾಯಿ ನಗದು ಪತ್ತೆಯಾಗಿತ್ತು. ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗಿತ್ತು.