ತಿರುವನಂತಪುರಂ: ಮಲಯಾಳಂನ ಪ್ರಖ್ಯಾತ ಹಾಸ್ಯನಟ ಉನ್ನಿರಾಜನ್ ಅವರು ಸಿನಿಮಾ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ಕಾಸರಗೋಡಿನ ಸರ್ಕಾರಿ ಮೆಟ್ರಿಕ್ ನಂತರದ ಹಾಸ್ಟೆಲ್ನಲ್ಲಿ ಸೋಮವಾರ (ಮೇ.9) ಸಫಾಯಿ ಕರ್ಮಚಾರಿ ಕೆಲಸಕ್ಕೆ ಸೇರಿದ್ದಾರೆ.
ಮಲಯಾಳಂನ ಪ್ರಸಿದ್ಧ ಧಾರಾವಾಹಿ ಮರಿಮಯಮ್ ಮೂಲಕ ಕೇರಳದಲ್ಲಿ ಖ್ಯಾತಿ ಗಳಿಸಿರುವ ಉನ್ನಿರಾಜನ್, ಕಿರುತೆರೆ ಹೊರತಾಗಿ ಅನೇಕ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.
ತಮ್ಮ ನಟನಾ ಕೆಲಸದಿಂದ ಅಂದುಕೊಂಡಿದ್ದನ್ನು ಮಾಡಲು ಆಗುವುದಿಲ್ಲ ಎಂಬ ಮನವರಿಕೆಯ ಬಳಿಕ ಉನ್ನಿರಾಜನ್ ಸಿನಿಮಾ ಕ್ಷೇತ್ರ ತೊರೆದು ಸರ್ಕಾರಿ ಉದ್ಯೋಗದ ಕಡೆ ಗಮನ ಹರಿಸಿದ್ದಾರೆ. ಹುದ್ದೆಯ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಈ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆಯೇ ಎಂಬುದನ್ನು ತಿಳಿಯಲು ಸಂದರ್ಶನ ಮಂಡಳಿಯಿಂದ ಉನ್ನಿರಾಜನ್ ಅವರನ್ನು ಪರೀಕ್ಷಿಸಲಾಗಿದ್ದು, ಅದರಲ್ಲಿ ಉನ್ನಿರಾಜನ್ ಯಶಸ್ವಿಯಾಗಿದ್ದಾರೆ.
ಮೆಟ್ರಿಕ್ ನಂತರದ ಹಾಸ್ಟೆಲ್‌ನಲ್ಲಿರುವ ಹತ್ತು ಶೌಚಾಲಯಗಳನ್ನು ಸ್ವಚ್ಛಗೊಳಿಸುವ ಒಬ್ಬ ಸಫಾಯಿ ಕರ್ಮಚಾರಿಯಾಗಿ ತನ್ನ ಕರ್ತವ್ಯಗಳ ಬಗ್ಗೆ ಚೆನ್ನಾಗಿ ತಿಳಿದಿರುವ ಉನ್ನಿರಾಜನ್ ಸೋಮವಾರದಿಂದ ತಮ್ಮ ಕೆಲಸವನ್ನು ವಹಿಸಿಕೊಂಡಿದ್ದಾರೆ. ಸಂಬಳ ಕಡಿಮೆ ಇದ್ದರೂ ಸಹ ಇದು ಖಾಯಂ ಕೆಲಸ ಆಗಿರುವುದರಿಂದ ಉನ್ನಿರಾಜನ್ ಇದನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಷ್ಟೇ ಅಲ್ಲದೆ, ಈ ಹುದ್ದೆಯ ವ್ಯಾಪ್ತಿಯಲ್ಲಿ ಅವರು ಸ್ವೀಪರ್, ಅಟೆಂಡರ್ ಇತ್ಯಾದಿಯಾಗಿ ಬಡ್ತಿಯನ್ನು ಪಡೆಯಬಹುದಾಗಿದೆ.
ಒಂದು ವೇಳೆ ಈ ಕೆಲಸವನ್ನು ನಾನು ಬೇಡ ಅಂದಿದ್ದರೂ ಆ ಕೆಲಸಕ್ಕೆ ಬೇರೊಬ್ಬರು ಆಯ್ಕೆ ಆಗಿರುತ್ತಿದ್ದರು. ಪ್ರತಿಯೊಂದು ಕೆಲಸಕ್ಕೂ ಅದರದ್ದೇ ಆದ ಮೌಲ್ಯವಿದೆ ಎನ್ನುತ್ತಾರೆ ಉನ್ನಿರಾಜನ್. ನಟನಿಗೆ ಶಾಶ್ವತ ಆದಾಯವನ್ನು ಮಾಡುವುದು ಅನಿವಾರ್ಯವಾದ ಕಾರಣ, ಅವರು ಈ ಆಫರ್ ಅನ್ನು ತೆಗೆದುಕೊಂಡಿದ್ದಾರೆ ಮತ್ತು ಸೋಮವಾರದಿಂದಲೇ ಕೆಲಸಕ್ಕೆ ಸೇರಿದ್ದಾರೆ.
ಸಿನಿಮಾಗಳಲ್ಲಿ ಅವಕಾಶಗಳು ಹಾವು-ಏಣಿ ಆಟದಂತಿರುತ್ತದೆ. ಅದರಲ್ಲೂ ಕೋವಿಡ್ ನಂತರ ಸಿನಿಮಾ ಕ್ಷೇತ್ರ ತುಂಬಾ ಬದಲಾವಣೆಯಾಗಿದ್ದು, ಅನೇಕ ಕಲಾವಿದರು ಸಂಕಷ್ಟದಲ್ಲಿರುವ ಗೊತ್ತೇ ಇದೆ. ಹೀಗಾಗಿ ಶಾಶ್ವತ ಉದ್ಯೋಗ ದೃಷ್ಟಿಯಿಂದ ಉನ್ನಿರಾಜನ್ ತೆಗೆದುಕೊಂಡಿರುವ ನಿರ್ಧಾರ ಸರಿ ಎನ್ನುವುದು ಹಲವರ ಅಭಿಪ್ರಾಯವಾಗಿದೆ.