ಉದಯಪುರ: ರಾಷ್ಟ್ರೀಯತೆ ಮತ್ತು ಪ್ರಜಾಪ್ರಭುತ್ವದ ಚೈತನ್ಯವನ್ನು ರಕ್ಷಿಸಲು ಸಮಾನ ಮನಸ್ಕ ಪಕ್ಷಗಳೊಂದಿಗೆ ಸಂವಾದ-ಸಂಪರ್ಕ ಸ್ಥಾಪಿಸಲು ಕಾಂಗ್ರೆಸ್ ಬದ್ಧವಾಗಿದೆ ಮತ್ತು ರಾಜಕೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಮೈತ್ರಿ ಮಾಡಿಕೊಳ್ಳಲು ಮುಕ್ತ ಮಾರ್ಗಗಳನ್ನು ಇಡುವುದಾಗಿ ಕಾಂಗ್ರೆಸ್ ಭಾನುವಾರ ಹೇಳಿದೆ.
ಕಳೆದ ಹಲವು ವರ್ಷಗಳಲ್ಲಿ ಪಕ್ಷ ಎದುರಿಸಿದ ಚುನಾವಣಾ ಸೋಲು ಮತ್ತು ಭಿನ್ನಾಭಿಪ್ರಾಯಗಳ ಹಿನ್ನಲೆಯಲ್ಲಿ ಕಾಂಗ್ರೆಸ್ ಮೂರು ದಿನಗಳ ‘ನವ ಸಂಕಲ್ಪ ಚಿಂತನ ಶಿಬಿರ’ವನ್ನು ರಾಜಸ್ಥಾನದ ಉದಯಪುರದಲ್ಲಿ ನಡೆಸಿತು. ಮೂರು ದಿನಗಳ 'ನವ್ ಸಂಕಲ್ಪ ಚಿಂತನ್ ಶಿಬಿರ್' ನಂತರ ಅಂಗೀಕರಿಸಿದ ಉದಯಪುರ ಘೋಷಣೆಯಲ್ಲಿ, ಕಾಂಗ್ರೆಸ್ ಭಾರತೀಯ ರಾಷ್ಟ್ರೀಯತೆ ಪಕ್ಷದ ಪ್ರಮುಖ ಪಾತ್ರವಾಗಿದೆ ಎಂದು ಪ್ರತಿಪಾದಿಸಿದೆ. ಆದರೆ ಇದಕ್ಕೆ ವಿರುದ್ಧವಾಗಿ, ಬಿಜೆಪಿಯ "ಹುಸಿ-ರಾಷ್ಟ್ರೀಯತೆ" ಅಧಿಕಾರದ ಹಸಿವಿನ ಮೇಲೆ ಕೇಂದ್ರೀಕೃತವಾಗಿದೆ. ಈ ವ್ಯತ್ಯಾಸವನ್ನು ಜನರ ಮುಂದೆ ತರುವುದು ಪ್ರತಿಯೊಬ್ಬ ಕಾಂಗ್ರೆಸ್ ನಾಯಕರ ಮತ್ತು ಕಾರ್ಯಕರ್ತರ ಕರ್ತವ್ಯವಾಗಿದೆ ಎಂದು ಘೋಷಣೆಯಲ್ಲಿ ತಿಳಿಸಿದೆ.
ಸಮಾವೇಶದಲ್ಲಿ ರಾಜಕೀಯ ವಿಷಯಗಳ ಚರ್ಚೆಯ ನೇತೃತ್ವದ ಗುಂಪಿನ ಶಿಫಾರಸುಗಳ ಆಧಾರದ ಮೇಲೆ, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಬದಲಾಯಿಸುವುದು, ಅದರ ಸಂಪೂರ್ಣ ರಾಜ್ಯತ್ವವನ್ನು ತೆಗೆದುಹಾಕುವುದು, ಚುನಾವಣೆಗಳನ್ನು ನಡೆಸದೇ ಇರುವುದು, "ತಪ್ಪಾದ ಡಿಲಿಮಿಟೇಶನ್" ಅನ್ನು ಜಾರಿಗೊಳಿಸುವುದು ಬಿಜೆಪಿ ಸರ್ಕಾರದ ಸಂಚಾಗಿದೆ. ಉಗ್ರಗಾಮಿಗಳಿಂದ ಸಾವಿರಾರು ಅಮಾಯಕ ನಾಗರಿಕರು, ಭದ್ರತಾ ಪಡೆಗಳು ಮತ್ತು ಕಾಶ್ಮೀರಿ ಪಂಡಿತರು ಬಲಿಯಾಗುತ್ತಿದ್ದಾರೆ. ಇದು ಕೇಂದ್ರ ಸರ್ಕಾರದ "ಗಂಭೀರ ವೈಫಲ್ಯ" ದ ಸಂಕೇತಗಳಾಗಿವೆ ಎಂದು ಕಾಂಗ್ರೆಸ್ ಟೀಕಿಸಿದೆ.
ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳು
50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪಕ್ಷದಲ್ಲಿ ಪ್ರಾತಿನಿಧ್ಯ, 'ಒಬ್ಬ ವ್ಯಕ್ತಿ, ಒಂದೇ ಹುದ್ದೆ', 'ಒಂದು ಕುಟುಂಬ, ಒಂದೇ ಟಿಕೆಟ್' ನೀತಿ ಜಾರಿಗೊಳಿಸಲು ಒತ್ತು ನೀಡುವ ಮೂಲಕ ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗೆ ಪಕ್ಷವನ್ನು ಸನ್ನದ್ದುಗೊಳಿಸಲು ಕಾಂಗ್ರೆಸ್ ನಿರ್ಧರಿಸಿದೆ.
'ನವ ಸಂಕಲ್ಪ ಚಿಂತನ ಶಿಬಿರ'ದ ಸಮಾಲೋಚನೆಯ ನಂತರ ಕಾಂಗ್ರೆಸ್ ಮೂರು ವಿಭಾಗಗಳನ್ನು ರಚಿಸಲು ನಿರ್ಧರಿಸಿದೆ. ‘ಸಾರ್ವಜನಿಕ ಒಳನೋಟ’, ‘ಚುನಾವಣಾ ನಿರ್ವಹಣೆ’ ಮತ್ತು ‘ರಾಷ್ಟ್ರೀಯ ತರಬೇತಿ’ ಎಂಬುದು ಆ ವಿಭಾಗಗಳಾಗಿವೆ. ‘ಒಂದು ಕುಟುಂಬ, ಒಂದೇ ಟಿಕೆಟ್’ ನಿಯಮವನ್ನು ಜಾರಿಗೊಳಿಸುವುದಾಗಿ ಕಾಂಗ್ರೆಸ್ ಘೋಷಿಸಿದ್ದು, ಆದರೆ ಕುಟುಂಬದ ಮತ್ತೊಬ್ಬ ಸದಸ್ಯರು ಕನಿಷ್ಠ ಐದು ವರ್ಷಗಳ ಕಾಲ ಪಕ್ಷದಲ್ಲಿ ಕೆಲಸ ಮಾಡಿದ್ದರೆ ಅವರನ್ನು ಪರಿಗಣಿಸುವುದಾಗಿ ಹೇಳಿದೆ. ಯಾವುದೇ ವ್ಯಕ್ತಿ ಐದು ವರ್ಷಗಳಿಗಿಂತ ಹೆಚ್ಚು ಕಾಲ ಪಕ್ಷದ ಸ್ಥಾನವನ್ನು ಹೊಂದಿರಬಾರದು ಎಂಬ ನೀತಿಯನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಲಾಗಿದೆ.
50 ವರ್ಷಕ್ಕಿಂತಲೂ ಕಡಿಮೆ ವಯಸ್ಸಿನವರಿಗೆ ಪಕ್ಷದ ಸಂಘಟನೆಯ ಎಲ್ಲಾ ಹಂತಗಳಲ್ಲಿ ಶೇಕಡಾ 50 ರಷ್ಟು ಪ್ರಾತಿನಿಧ್ಯವನ್ನು ನೀಡಲು ಪಕ್ಷವು ನಿರ್ಧರಿಸಿದೆ. ರಾಜಕೀಯ ಸವಾಲುಗಳ ಕುರಿತು ಚರ್ಚಿಸಲು ಕಾಂಗ್ರೆಸ್ ಅಧ್ಯಕ್ಷರು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರನ್ನು ಒಳಗೊಂಡ ಸಲಹಾ ಸಮಿತಿಯನ್ನು ರಚಿಸಲಿದ್ದಾರೆ ಎಂದು ಪ್ರಕಟಿಸಲಾಗಿದೆ. ಸಮಾರೋಪ ಭಾಷಣದಲ್ಲಿ ಮಾತನಾಡಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಸಾಂಸ್ಥಿಕ ಸುಧಾರಣೆಗಾಗಿ ಕಾರ್ಯಪಡೆಯನ್ನು ರಚಿಸಲಾಗುವುದು ಎಂದು ಘೋಷಿಸಿದರು.
ಅಕ್ಟೋಬರ್ 2ರ ಮಹಾತ್ಮ ಗಾಂಧಿ ಜಯಂತಿಯಂದು ಕಾಂಗ್ರೆಸ್ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 'ಭಾರತ್ ಜೋಡೋ (ಸಂಪರ್ಕ) ಯಾತ್ರೆ'ಯನ್ನು ಪ್ರಾರಂಭಿಸಲಿದೆ. ಕಾಂಗ್ರೆಸ್‌ನ ಎರಡನೇ ಹಂತದ 'ಜನ ಜಾಗರಣ ಯಾತ್ರೆ'ಯನ್ನು ಜೂನ್ 15 ರಿಂದ ಜಿಲ್ಲಾ ಮಟ್ಟದಲ್ಲಿ ಪ್ರಾರಂಭಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.