ಮುಳ್ಳೇರಿಯ: ಡೆಂಗ್ಯೂ ಜ್ವರ ವ್ಯಾಪಕವಾಗಿ ವರದಿಯಾಗಿದ್ದ ಪನತ್ತಡಿ ಪಂಚಾಯತಿಯ ವಿವಿಧ ವಾರ್ಡ್ ಗಳಲ್ಲಿ ಜನಪ್ರತಿನಿಧಿಗಳು, ಆರೋಗ್ಯ ಕಾರ್ಯಕರ್ತರು, ವಿದ್ಯಾರ್ಥಿಗಳು ಸಂಯುಕ್ತವಾಗಿ ಮುಂಜಾಗ್ರತಾ ಕ್ರಮಗಳ ಭಾಗವಾಗಿ ಸೊಳ್ಳೆಮೂಲಗಳ ನಿರ್ಮೂಲನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಜಿಲ್ಲಾ ರೋಗವಾಹಕ ನಿಯಂತ್ರಣ ಘಟಕ ಕಾಸರಗೋಡು, ಪಾಣತ್ತೂರು ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎನ್‍ಎಸ್‍ಎಸ್ ಘಟಕ, ರಾಜಪುರದ ಸೈಂಟ್ ಪಯಸ್ ಕಾಲೇಜು ಜಂಟಿಯಾಗಿ ಮನೆ ಮನೆಗೆ ತೆರಳಿ ಸೊಳ್ಳೆ ನಿರ್ಮೂಲನೆ ಹಾಗೂ ಜಾಗೃತಿ ಅಭಿಯಾನವನ್ನು ನಡೆಸಿತು. ಒಟ್ಟು 12 ತಂಡಗಳು ಮನೆಗಳಿಗೆ ಭೇಟಿ ನೀಡಿ ತೋಟಗಳನ್ನು ಪರಿಶೀಲಿಸಿದವು.
ಪನತ್ತಡಿ ಪಂಚಾಯತಿ ಅಧ್ಯಕ್ಷ ಪ್ರಸನ್ನ ಪ್ರಸಾದ್ ಅವರು ಚಟುವಟಿಕೆಗಳಲ್ಲಿ ಭಾಗವಹಿಸುವ ಎನ್‍ಎಸ್‍ಎಸ್ ಸ್ವಯಂಸೇವಕರಿಗೆ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಉಪಾಧ್ಯಕ್ಷ ಪಿ.ಎಂ.ಕುರಿಯಾಕೋಸ್ ವಹಿಸಿದ್ದರು.ವಾರ್ಡ್ ಸದಸ್ಯ ಕೆ.ಜೆ.ಜೇಮ್ಸ್ ಸ್ವಾಗತಿಸಿ, ಆರೋಗ್ಯ ನಿರೀಕ್ಷಕ ವಿನಯಕುಮಾರ್ ವಂದಿಸಿದರು. ಜಿಲ್ಲಾ ರೋಗವಾಹಕ ನಿಯಂತ್ರಣ ಘಟಕದ ಆರೋಗ್ಯ ಮೇಲ್ವಿಚಾರಕ ಎಂ ವೇಣು ಗೋಪಾಲನ್ ಮತ್ತು ಆರೋಗ್ಯ ನಿರೀಕ್ಷಕ ಸರಸಿಜನ್ ತಂಬಿ ಸ್ವಯಂಸೇವಕರಿಗೆ ತರಬೇತಿ ನೀಡಿದರು. ಮುಂದಿನ ದಿನಗಳಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ರೋಗಪೀಡಿತ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.