ಲಖನೌ: ಮದುವೆಗೆ ವಿಡಿಯೊಗ್ರಾಫರ್ ಕರೆತರಲು ವರ ವಿಫಲನಾದ ಕಾರಣ, ಕೋಪಗೊಂಡ ವಧು ಮದುವೆಯನ್ನೇ ನಿರಾಕರಿಸಿದ ಘಟನೆ ಉತ್ತರಪ್ರದೇಶದ ಕಾನ್ಪುರದ ಗ್ರಾಮಾಂತರ ಜಿಲ್ಲೆಯಲ್ಲಿ ನಡೆದಿದೆ.
ವರದಿಗಳ ಪ್ರಕಾರ, ವಧು-ವರರು ಭಾನುವಾರ 'ಜೈಮಾಲ್' (ಪರಸ್ಪರ ಮಾಲಾರ್ಪಣೆ) ಸಮಾರಂಭಕ್ಕೆ ಸಿದ್ಧರಾಗಿದ್ದರು.
'ತನ್ನ ಜೀವನದ ಪ್ರಮುಖ ಕ್ಷಣವನ್ನು ಸೆರೆಹಿಡಿಯುವ ಬಯಕೆಯನ್ನು ಹೊಂದಿರದ ವ್ಯಕ್ತಿಯು, ತನ್ನ ಭಾವನೆಗಳಿಗೆ ಹೇಗೆ ಸಂವೇದನಾಶೀಲನಾಗಿರಲು ಸಾಧ್ಯ' ಎಂದ ವಧು ಮದುವೆ ನಿರಾಕರಿಸಿದ್ದಾಳೆ. ಈ ಸಂಬಂಧ ವರನ ಕುಟುಂಬ ಹಾಗೂ ವಧುವಿನ ಕುಟುಂಬದ ಸದಸ್ಯರು ಮನವರಿಕೆ ಮಾಡಿಕೊಳ್ಳಲು ಪ್ರಯತ್ನಿಸಿದರೂ ವಧು ಮಾತ್ರ ವಾಪಸ್ ಬರಲಿಲ್ಲ.
ಠಾಣೆ ಮೆಟ್ಟಿಲೇರಿದ ಕುಟುಂಬ: ವಿಡಿಯೊಗ್ರಾಫರ್ ಮತ್ತು ಛಾಯಾಗ್ರಹಕನನ್ನು ಕರೆತರುವಲ್ಲಿ ನಡೆಸಿದ ಪ್ರಯತ್ನದ ಬಗ್ಗೆ ವರ, ವಧುವಿಗೆ ವಿವರಿಸಲು ಪ್ರಯತ್ನಿಸಿದನಾದರೂ, ವಧು ಮಾತ್ರ ತನ್ನ ಪಟ್ಟು ಬಿಡಲಿಲ್ಲ. ಕೊನೆಗೆ ಸಮಸ್ಯೆ ಪರಿಹರಿಸಲು ಎರಡೂ ಕುಟುಂಬಗಳು ಸ್ಥಳೀಯ ಪೊಲೀಸ್ ಠಾಣೆ ಮೆಟ್ಟಿಲೇರಿದವು.
ಸುದೀರ್ಘ ಚರ್ಚೆಯ ನಂತರ, ಎರಡೂ ಕುಟುಂಬಗಳು ಪರಸ್ಪರ ವಿನಿಮಯ ಮಾಡಿಕೊಂಡ ನಗದು ಮತ್ತು ಉಡುಗೊರೆಗಳನ್ನು ಹಿಂದಿರುಗಿಸಲು ಒಪ್ಪಿಕೊಂಡವು. 'ಪರಸ್ಪರ ತಿಳಿವಳಿಕೆಯೊಂದಿಗೆ ಸಮಸ್ಯೆಯನ್ನು ಬಗೆಹರಿಸಲಾಯಿತು' ಎಂದು ಸ್ಥಳೀಯ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಡೋರಿ ಲಾಲ್ ತಿಳಿಸಿದ್ದಾರೆ.