ಮುಂಬೈ: ದೇಶೀಯ ಷೇರು ಮಾರುಕಟ್ಟೆಗಳಲ್ಲಿನ ಸತತ ಕುಸಿತದ ಬಳಿಕ ರೂಪಾಯಿ ಮಂಗಳವಾರ ತನ್ನ ಸಾರ್ವಕಾಲಿಕ ದಿನದ ಕನಿಷ್ಠ ಮಟ್ಟವಾದ 77.79 ರಿಂದ ಚೇತರಿಸಿಕೊಂಡಿದ್ದು, ಮೌಲ್ಯ 7 ಪೈಸೆಗಳಷ್ಟು ಏರಿಕೆಯಾಗಿದೆ.
ಮಂಗಳವಾರ 77.67 ರೂನೊಂದಿಗೆ ವಹಿವಾಟು ಆರಂಭವಾಗಿತ್ತು. ಬೆಳಗ್ಗಿನ ವಹಿವಾಟಿನ ಸಮಯದಲ್ಲಿ ಅಮೆರಿಕದ ಡಾಲರ್ ಎದುರು ರೂಪಾಯಿ ಮೌಲ್ಯವು ಮತ್ತೆ 14 ಪೈಸೆಗಳಷ್ಟು ಕುಸಿದು 77.69 ರೂ. ದಾಖಲೆಯ ಕನಿಷ್ಠ ಮಟ್ಟಕ್ಕೆ ತಲುಪಿತು. ಬಳಿಕ ದಿನದ ವಹಿವಾಟಿನ ಅಂತ್ಯಕ್ಕೆ ರೂಪಾಯಿ ಮೌಲ್ಯ ಚೇತರಿಕೆ ಕಂಡು ಡಾಲರ್ ಎದುರು77.47ಕ್ಕೆ ಬಂದು ನಿಂತಿದೆ.
ಕಳೆದ ವಾರ ರೂಪಾಯಿ ಮೌಲ್ಯ ಅಮೆರಿಕನ್ ಡಾಲರ್ ಎದುರು ಎರಡು ಬಾರಿ ಕುಸಿತ ಕಂಡಿತ್ತು. ಮೇ 9ರಂದು ಮೇ 12ರಂದು ಡಾಲರ್ ಎದುರು ರೂಪಾಯಿ ಮೌಲ್ಯ 51 ಪೈಸೆ ಇಳಿಕೆ ಕಂಡು 77.41ರೂ. ತಲುಪಿತ್ತು. ಆ ಬಳಿಕ ಮೇ12ರಂದು ರೂಪಾಯಿ ಮೌಲ್ಯ ಅಮೆರಿಕದ ಡಾಲರ್ (US Dollar) ಎದುರು 77.63ರ ಕನಿಷ್ಠ ಮಟ್ಟಕ್ಕೆ ತಲುಪಿತ್ತು.ರೂಪಾಯಿ ಮೌಲ್ಯ ಇಳಿಕೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಬಲವರ್ಧನೆಗೊಳ್ಳುತ್ತಿರುವುದೇ ಕಾರಣ ಎಂದು ತಜ್ಞರು ಹೇಳಿದ್ದಾರೆ. ಇನ್ನು ಭಾರತೀಯ ಬಂಡವಾಳ ಮಾರುಕಟ್ಟೆಗಳಿಂದ ವಿದೇಶಿ ಬಂಡವಾಳದ ಹೊರಹರಿವು ಹೆಚ್ಚಿರುವುದು ಕೂಡ ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.
ಜಿಗಿದ ಷೇರುಪೇಟೆ
ಈ ಎಲ್ಲ ಬೆಳವಣಿಗೆಗಳ ನಡುವೆ ಷೇರು ಮಾರುಕಟ್ಟೆಯಲ್ಲಿ ಸಂವೇದಿ ಸೂಚ್ಯಂಕಗಳು ಸತತ ಎರಡನೇ ದಿನವೂ ಏರಿಕೆ ದಾಖಲಿಸಿವೆ. ಮುಂಬೈ ಷೇರುಪೇಟೆ (BSE) ಸಂವೇದಿ ಸೂಚ್ಯಂಕ (Sensex) 1,344 ಪಾಯಿಂಟ್ ಗಳ ಏರಿಕೆ ಕಂಡು 54,318 ಮಟ್ಟ ತಲುಪುವ ಮೂಲಕ ಮೂರು ತಿಂಗಳಲ್ಲೇ ಗರಿಷ್ಠ ಮಟ್ಟದ ಏರಿಕೆ ದಾಖಲಿಸಿದೆ. ಇನ್ನು ರಾಷ್ಟ್ರೀಯ ಷೇರುಪೇಟೆ (NSE) ಸಂವೇದಿ ಸೂಚ್ಯಂಕ (Nifty) 417 ಪಾಯಿಂಟ್ಸ್ ಏರಿಕೆ ದಾಖಲಿಸುವ ಮೂಲಕ 16,259 ಮಟ್ಟ ತಲುಪಿತ್ತು.
ಕಳೆದ ವಾರ ಸತತ ಕುಸಿತ ದಾಖಲಿಸಿದ್ದ ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಸೋಮವಾರ ಏರಿಳಿತದ ದಾಖಲಿಸಿದ್ದವು. ಮಂಗಳವಾರ ಸೆನ್ಸೆಕ್ಸ್ ಹಾಗೂ ನಿಫ್ಟಿ ಮರಳಿ ಹಳಿಗೆ ಬಂದಿದ್ದು, ಜಿಗಿತ ದಾಖಲಿಸಿವೆ. ಸೆನ್ಸೆಕ್ಸ್ 180.22 ಪಾಯಿಂಟ್ಸ್ ಅಥವಾ ಶೇ.0.34 ಏರಿಕೆ ಕಂಡಿದೆ. ಈ ಮೂಲಕ ಸತತ ಆರು ದಿನಗಳ ಕುಸಿತಕ್ಕೆ ಬ್ರೇಕ್ ನೀಡಿ ಮತ್ತೆ ಗಳಿಕೆಯ ಹಾದಿಗೆ ಮರಳಿದೆ. ಇನ್ನು ನಿಫ್ಟಿ 60.15 ಪಾಯಿಂಟ್ಸ್ ಅಥವಾ ಶೇ.0.38 ಗಳಿಕೆ ದಾಖಲಿಸಿದೆ. ಕಳೆದ ಆರು ದಿನಗಳಲ್ಲಿ ಸೆನ್ಸೆಕ್ಸ್ ಹಾಗೂ ನಿಫ್ಟಿ ಶೇ.5ಕ್ಕಿಂತಲೂ ಹೆಚ್ಚಿನ ನಷ್ಟ ಅನುಭವಿಸಿದ್ದವು.
ರಿಲಾಯನ್ಸ್ , ಟಾಟಾ ಸ್ಟೀಲ್, ಇಂಡಸ್ ಇಂಡ್ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಮಹೀಂದ್ರಾ ಮತ್ತು ಮಹೀಂದ್ರಾ, ಬಜಾಜ್ ಫೈನಾನ್ಸ್, ಎಚ್ ಸಿಎಲ್ ಟೆಕ್, ಮಾರುತಿ, ಬಜಾಜ್ ಫೈನಾನ್ಸ್, ಎಚ್ ಡಿಎಫ್ ಸಿ ಲಿ. ಮುಂತಾದ ಷೇರುಗಳು ಲಾಭ ಗಳಿಸಿವೆ. ಇನ್ನು ಟಿಸಿಎಸ್, ಸನ್ ಫಾರ್ಮಾ, ನೆಸ್ಲೆ ಇಂಡಿಯಾ, ಏಷ್ಯನ್ ಪೆಂಟ್ಸ್ ಹಾಗೂ ಇನ್ಫೋಸಿಸ್ ಷೇರುಗಳು ಹಿನ್ನಡೆ ಕಂಡಿವೆ.