ಜನರಲ್ಲಿ ರೋಗ ಮತ್ತು ಪಥ್ಯದ ಬಗ್ಗೆ ತಲೆ ತಲಾಂತರಗಳಿಂದ ಬಂದ ಕೆಲವು ನಂಬಿಕೆಗಳು ಆಳವಾಗಿ ಬೇರೂರಿವೆ. ಅವುಗಳಲ್ಲಿ ಕೆಲವು ಸರಿಯಾಗಿ ಇದ್ದರೂ ಉಳಿದವು ವೈಜ್ಞಾನಿಕ ನೆಲೆಗಟ್ಟು ಇಲ್ಲದವು. ಹೆಚ್ಕಿನ ಸಂದರ್ಭಗಳಲ್ಲಿ ರೋಗಕ್ಕಿಂತ ಹೆಚ್ಚು ತಮ್ಮ ಮೇಲೆ ಅನಾವಶ್ಯಕ ಆಹಾರ ನಿರ್ಭಂಧ ಹೇರಿ ಕೊಂಡು ಬಳಲುವರು.
ಮಕ್ಕಳಲ್ಲಿ (ಮತ್ತು ಹಿರಿಯರಲ್ಲಿ) ಸೋಂಕುರೋಗಗಳಾದ ಧಡಾರ, ಕೋಟಲೆ ಇತ್ಯಾದಿ ಬಂದಾಗ, ಹಳ್ಳಿಗಳಲ್ಲಿ ರೋಗಿಗಳಿಗೆ ಮಾಮೂಲಿನ ಆಹಾರವನ್ನು ನಿಲ್ಲಿಸಿ ಬರೀ ಗಂಜಿ ಹಾಲು ಕೊಡುವರು. ಇದು ಅನಾವಶ್ಯಕ. ಮಾಮೂಲಿಯ ಆಹಾರವನ್ನೇ ಮುಂದುವರಿಸಬಹುದು. ಮೊಟ್ಟೆ, ಮಾಂಸ, ದ್ವಿದಳಧಾನ್ಯಗಳು ಮತ್ತು ತರಕಾರಿ-ಹಣ್ಣುಗಳು ಸೇರಿದ ಪೌಷ್ಟಿಕಾಂಶ ಇರುವ ಆಹಾರ ಬಹುತೇಕ ಸೋಂಕುರೋಗಗಳ ನಿವಾರಣೆಗೆ ಸಹಾಯಕಾರಿ. ಹಲವು ಬಾರಿ ರೋಗಿಯ ಬಂಧುಗಳಲ್ಲಿ ಏನೇನು ಆಹಾರ ಕೊಡುತ್ತಿದ್ದೀರಿ ಎಂದು ಕೇಳಿದಾಗ 'ಡಾಕ್ಟ್ರೇ ನಾವು ನಂಜುಪದಾರ್ಥಗಳನ್ನು ಏನೂ ಕೊಡುವುದಿಲ್ಲ' ಎನ್ನುತ್ತಾರೆ. ನಂಜು ಯಾವುದು - ಎಂದು ಪ್ರಶ್ನೆ ಹಾಕಿದರೆ ಬದನೆ, ಬಸಳೆಸೊಪ್ಪಿನಂತಹ ತರಕಾರಿಗಳು, ಕಡಲೆ, ಮೊಟ್ಟೆ, ಮಾಂಸ ಮುಂತಾದವನ್ನು ವಿನಾಕಾರಣ ಕಪ್ಪು ಪಟ್ಟಿಗೆ ಸೇರಿಸಿಲ್ಪಟ್ಟ ವಸ್ತುಗಳ ಹೆಸರು ಹೊರ ಬರುವುದು.
ಇನ್ನು ಕೆಲವು ಸಂದರ್ಭ ರೋಗಗಳ ಬಗ್ಗೆಯೇ ಆಳವಾದ ತಪ್ಪು ಕಲ್ಪನೆ ಅನಾವಶ್ಯಕ ಪಥ್ಯಪಾಲನೆಗೆ ಕಾರಣ ಆಗುವುದು. ಉದಾಹರಣೆಗೆ, ಜಾಂಡಿಸ್ ಅಥವಾ ಹಳದಿಕಾಮಾಲೆಯನ್ನು ಒಂದು ಕಾಯಿಲೆ ಎಂದೇ ಇಂದಿಗೂ ವಿದ್ಯಾವಂತರು ಕೂಡ ಭಾವಿಸಿರುವುದು. ನಮ್ಮ ಶರೀರದಲ್ಲಿ ಸಹಜವಾಗಿ ಅಥವಾ ಕಾಯಿಲೆಯಿಂದ ಸತ್ತ ಕೆಂಪು ರಕ್ತಕಣಗಳ ವಿಲೇವಾರಿಯ ವ್ಯತ್ಯಯ ಉಂಟುಮಾಡುವ ಅನೇಕ ಕಾಯಿಲೆಗಳು ಇದ್ದು ಅವುಗಳ ಸಾಮಾನ್ಯ ಲಕ್ಷಣ ಜಾಂಡಿಸ್. ಅಕಾಲದಲ್ಲಿ ಕೆಂಪುಕಣಗಳು ನಾಶವಾಗುವ (Haemolytic jaundice) ರೋಗಗಳ ಜೊತೆ ಅವುಗಳ ಅವಶೇಷಗಳನ್ನು ಲಿವರ್‌ನಲ್ಲಿ ನೀರಿನಲ್ಲಿ ಕರಗಿಸಿ ವಿಸರ್ಜಿಸುವ ಕ್ರಿಯೆ ನಿಧಾನವಾಗುವ, ಲಿವರ್‌ನ ವೈರಸ್ ಸೋಂಕು, ಮಲೇರಿಯಾ ಮತ್ತು ಇಲಿಜ್ವರಗಳಂಥ ಕಾಯಿಲೆಗಳಿವೆ. ಕೆಂಪು ರಕ್ತಕಣದ ಪೂರಣಕ್ಕೆ, ಲಿವರ್‌ನ ಸೋಂಕು ಇದ್ದರೆ ಅದನ್ನು ಎದುರಿಸಲು ಪೌಷ್ಟಿಕ ಆಹಾರ ಅವಶ್ಯಕ. ಲಿವರ್‌ನ ಸೋಂಕು ಇದ್ದರೆ ಎಲ್ಲಾ ಸೋಂಕು ಕಾಯಿಲೆಗಳಲ್ಲಿ ಇರುವಂತೆ ಹಸಿವು ಕಡಿಮೆ ಮತ್ತು ವಾಕರಿಕೆ ಇರುವುದು. ಲಿವರ್‌ಗೆ ಪಿತ್ತಜನಕಾಂಗ ಎಂಬ ಹೆಸರಿದೆ. ಇದರಿಂದ ಅದರ ಸೋಂಕಿನ ಒಂದು ಹಂತದಲ್ಲಿ ಪಿತ್ತರಸದ ಸಾಗಣೆ ವ್ಯತ್ಯಯ ಆಗಿ ಎಣ್ಣೆಪದಾರ್ಥವನ್ನು ಸೇವಿಸಿದಾಗ ಜೀರ್ಣಕ್ರಿಯೆ ನಿಧಾನವಾಗಿ ಹೊಟ್ಟೆ ಉಬ್ಬರಿಸಿದಂತೆ ಆಗಬಹುದೇ ವಿನಾ ಶರೀರಕ್ಕೆ ತೊಂದರೆ ಏನೂ ಇಲ್ಲ. ಅತಿಯಾದ ಪಥ್ಯದಿಂದ ಕಾಯಿಲೆ ವಾಸಿಯಾಗುವುದು ನಿಧಾನವಾಗುವುದು.
ಶ್ವಾಸನಾಳ ಮತ್ತು ಕೋಶಸಂಬಂಧಿ ಕಾಯಿಲೆಗಳಲ್ಲಿ ಕಫ ಉಂಟಾಗುತ್ತದೆ. ಬಹಳ ಮಂದಿ ಹಾಲು ಕುಡಿದರೆ ಕಫ ಆಗುವುದು ಎಂದು ತಿಳಿದಿರುತ್ತಾರೆ. ಹಾಲು ಬಿಳಿ, ಕಫ ಕೂಡ ಬಿಳಿ ಇರುವುದು ಈ ನಂಬಿಕೆಗೆ ಕಾರಣ. ಆದರೆ ಇದು ಸರಿಯಲ್ಲ. ಆಸ್ತಮಾ ಕಾಯಿಲೆ ಅಲರ್ಜಿಯಿಂದ ಶ್ವಾಸನಾಳಗಳಲ್ಲಿ ನೀರು ತುಂಬಿ ಉಸಿರು ಹೊರಹೋಗಲು ಸರಿಯಾದ ಎಡೆಯಿಲ್ಲದೆ ಉಸಿರಾಟ ಕಷ್ಟವಾಗುವುದಲ್ಲದೆ 'ಸುಯಿನ್ ಸುಯಿನ್' ಎಂಬ ಶಬ್ದ ಬರುವುದು. ಇಲ್ಲಿ ಗಾಳಿಯಯಲ್ಲಿ ಬರುವ ವಸ್ತುಗಳೇ ಆಲರ್ಜಿಕಾರಕಳಾಗಿ ಇರುತ್ತವೆಯಾದರೂ ರೋಗಿಗಳು ತಾವೇ ಆಹಾರ ಪಥ್ಯವನ್ನು ಹೇರಿಕೊಳ್ಳುವುದನ್ನು ಕಾಣುತ್ತೇವೆ.
ವಾಂತಿ-ಭೇದಿಗಳು ಸಾಮಾನ್ಯವಾಗಿ ಬರುವ ಕಾಯಿಲೆಗಳಾಗಿದ್ದು, ಹೆಚ್ಚಾಗಿ ವೈರಸ್‌ಗಳು ಉಂಟು ಮಾಡುವಂತಹವು. ಇಲ್ಲಿ ಜಲ ಮತ್ತು ಲವಣಪೂರಣ ಬಹಳ ಮುಖ್ಯ. ಆದರೆ ವಾಂತಿ ಆಗುವುದು - ಎಂದು ನೀರೇ ಕುಡಿಸರು. ಇದು ತಪ್ಪು. ವಾಂತಿ ಸ್ವಲ್ಪ ಸಮಯದಲ್ಲಿ ನಿಲ್ಲುವುದು ಮತ್ತು ಕುಡಿದದ್ದು ಎಲ್ಲ ವಾಂತಿ ಆಗದು. ಜಲಲವಣ ಪುಡಿಗಳ ದರ ಅಗ್ಗವಾಗಿದ್ದು, ಎಲ್ಲ ಔಷಧ ಅಂಗಡಿಗಳಲ್ಲಿ ಲಭ್ಯ. ಇಲ್ಲದಿದ್ದರೆ ನಾವೇ ಮನೆಯಲ್ಲಿ ತಯಾರಿಸಿಕೊಳ್ಳಬಹುದು.
ಅಧಿಕ ರಕ್ತದ ಒತ್ತಡ ಇರುವವರು ಅಡುಗೆಗೆ ಹಾಕಿದ ಉಪ್ಪನ್ನು ಬಿಟ್ಟು ಹೆಚ್ಚು ಸೇರಿಸಿಕೊಳ್ಳದೆ ಇದ್ದರೆ ಸಾಕು; ಅಂದರೆ ಉಪ್ಪಿನಕಾಯಿ, ಉಪ್ಪಿನಲ್ಲಿ ಹಾಕಿದ ಮೀನು, ಹಲಸು, ಮಾವು, ಸೆಂಡಿಗೆ ಮುಂತಾದವುಗಳಿಂದ ದೂರ ಇರಬೇಕು.
ಬಳಕೆಯಲ್ಲಿ ಇರುವ ಎಲ್ಲಾ ಏಕದಳ ಧಾನ್ಯಗಳಲ್ಲಿಯೂ ಸಕ್ಕರೆಯ ಅಂಶ ಹೆಚ್ಚು ಕಡಿಮೆ ಒಂದೇ ಮಟ್ಟದಲ್ಲಿ ಇರುವ ಕಾರಣ ಡಯಾಬಿಟಿಸ್ ಕಷ್ಟ ಪಟ್ಟು ಹೊಸತಕ್ಕೆ ಹೊಂದಿಕೊಳ್ಳುವ ಅವಶ್ಯಕತೆ ಇಲ್ಲ. ಅಲ್ಲದೆ ಮನೆಯಲ್ಲಿ ಒಬ್ಬೊಬ್ಬರಿಗೆ ಒಂದೊಂದು ಪ್ರತ್ಯೇಕ ಅಡುಗೆಯನ್ನು ತಯಾರಿಸುವುದು ಪ್ರಾಯೋಗಿಕವೂ ಅಲ್ಲ. ಸೇವನೆ ಹಿತಮಿತವಾಗಿ ಇರಬೇಕಾದುದು ಮುಖ್ಯ. ಇಲ್ಲಿಯೂ ಕಹಿಯಾದ ಮತ್ತು ಖಾರದ ವಸ್ತುಗಳನ್ನು ಸೇವಿಸಿದರೆ ಬಾಯಲ್ಲಿ ಸಿಹಿ ಕಡಿಮೆಯಾದೀತೇ ಹೊರತು ರಕ್ತದಲ್ಲಿ ಅಲ್ಲ.
ಗರ್ಭಿಣಿ ಮತ್ತು ಬಾಣಂತಿಯರಿಗೆ ಸಮತೂಕದ ಪೌಷ್ಟಿಕ ಆಹಾರ ಬಹಳ ಮುಖ್ಯವಾಗಿದ್ದು. ತರಕಾರಿ, ಮೀನು, ಮಾಂಸ, ಹಣ್ಣು, ದ್ವಿದಳಧಾನ್ಯಗಳು ಎಲ್ಲವೂ ಒಳ್ಳೆಯದು. ಅವರಿಗೆ 'ಅದು ನಂಜು ಇದು ನಂಜು' ಎಂದು ಅನ್ನ, ಹೈನು ಉತ್ಪನ್ನಗಳು ಮತ್ತು ಸಿಹಿತಿಂಡಿಗಳನ್ನು ಮಾತ್ರ ಕೊಡುವುದು ಒಳ್ಳೆಯದಲ್ಲ. ನಾವು ಹಸುಗಳಿಗೆ ಪೌಷ್ಟಿಕ ಆಹಾರ ಕೊಡುತ್ತೇವೆ; ಮನುಷ್ಯರಿಗೆ ಮಾತ್ರ ಕೊಡಲು ಹಿಂಜರಿಯುತ್ತೇವೆ.
ಪಥ್ಯಪಕ್ಷದವರು ಕೆಲವು ವಸ್ತುಗಳನ್ನು ಉಷ್ಣವೆನ್ನುವರು, ಇನ್ನು ಕೆಲವನ್ನು ಶೀತವೆನ್ನುವರು. ಇದನ್ನು ವೈಜ್ನಾನಿಕವಾಗಿ ವಿಶ್ಲೇಷಿಸಲು ಹೋದರೆ ತಲೆ ಬಿಸಿಯಾಗುವುದು. ಸೌತೆಕಾಯಿ, ಬಸಳೆಗಳು ಶೀತಕಾರಕವಾದರೆ, ಐಸ್ ಕ್ರೀಮ್ ಉಷ್ಣ, ಬಡವರ ಬಾದಾಮಿ ನೆಲಗಡಲೆ ಪಿತ್ತ. ಈ ವರ್ಗೀಕರಣಕ್ಕೆ ವೈಜ್ಞಾನಿಕ ಆಧಾರ ಇದ್ದಂತಿಲ್ಲ.
ಬಾಲಂಗೋಚಿ: ವೈದ್ಯರ ಸಲಹೆ ಹೊರತಾಗಿ ಮಾಡುವ ಪಥ್ಯಕ್ಕೆ 'ಪಥ್ಯೇತರ ಚಟುವಟಿಕೆ' ಎನ್ನಬಹುದು.