ಚೆನ್ನೈ: "ಶವರ್ಮಾ ತಿನ್ನುವುದರಿಂದ ಜನರು ದೂರವಿರಬೇಕು ಏಕೆಂದರೆ ಅದು ಭಾರತೀಯ ಖಾದ್ಯದ ಭಾಗವಾಗಿಲ್ಲ" ಎಂದು ತಮಿಳುನಾಡು ಆರೋಗ್ಯ ಸಚಿವ ಮಾ ಸುಬ್ರಮಣಿಯನ್ ಹೇಳಿದ್ದಾರೆ.
ರವಿವಾರ ರಾಜ್ಯದಲ್ಲಿ ಆಯೋಜಿಸಲಾಗಿದ್ದ ಬೃಹತ್ ಲಸಿಕಾಕರಣ ಅಭಿಯಾನದ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಅವರು ಜನರಿಗೆ ಇತರ ಖಾದ್ಯಗಳು ಲಭ್ಯವಿರುವಾಗ ಆರೋಗ್ಯವನ್ನು ಬಾಧಿಸುವ ಆಹಾರ ಸೇವಿಸಬಾರದು ಎಂದಿದ್ದಾರೆ.
"ಶವರ್ಮಾ ಒಂದು ಪಾಶ್ಚಿಮಾತ್ಯ ಆಹಾರ. ಅದು ಪಾಶ್ಚಿಮಾತ್ಯ ರಾಷ್ಟ್ರಗಳ ಹವಾಮಾನ ಪರಿಸ್ಥಿತಿಗೆ ಸೂಕ್ತವಾಗಬಹುದು. ಅಲ್ಲಿ ತಾಪಮಾನ ಮೈನಸ್ ಡಿಗ್ರಿ ತನಕ ಕೂಡ ಹೋಗಬಹುದು ಹಾಗೂ ಹೊರಗೆ ಈ ಆಹಾರ ಇಟ್ಟರೂ ಹಳಸುವುದಿಲ್ಲ. ಯಾವುದೇ ಮಾಂಸಾಹಾರವಿರಲಿ, ಅದನ್ನು ಫ್ರೀಝರ್‍ನಲ್ಲಿ ಸರಿಯಾಗಿ ಇರಿಸದೇ ಇದ್ದರೆ ಹಾಳಾಗುತ್ತದೆ, ಅಂತಹ ಹಳಸಿದ ವಸ್ತುಗಳನ್ನು ತಿಂದರೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ" ಎಂದು ಅವರು ಹೇಳಿದ್ದಾರೆ.
ದೇಶಾದ್ಯಂತ ಇರುವ ಶವರ್ಮಾ ಅಂಗಡಿಗಳಲ್ಲಿ ಸೂಕ್ತ ಸ್ಟೋರೇಜ್ ವ್ಯವಸ್ಥೆಯಿಲ್ಲ ಹಾಗೂ ಅವರು ಅವುಗಳನ್ನು ತೆರೆದ ಸ್ಥಿತಿಯಲ್ಲಿಯೇ ಇರಿಸುತ್ತಾರೆ. ಯುವಜನತೆಗೆ ಇದು ಇಷ್ಟವಾಗುತ್ತಿರುವುದರಿಮದ ಸೂಕ್ತ ಸವಲತ್ತು ಇಲ್ಲದೇ ಇದ್ದರೂ ಮಾರಾಟ ಮಾಡುವ ಹಲವ ಮಳಿಗೆಗಳಿವೆ ಎಂದು ಸಚಿವರು ಹೇಳಿದರು.
ಎರಡು ಮೂರು ದೂರುಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅಂಗಡಿಗಳ ಪರಿಶೀಲನೆಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು. ಸೂಕ್ತ ವ್ಯವಸ್ಥೆಗಳಿಲ್ಲದ ಸುಮಾರು 1000 ಮಳಿಗೆಗಳಿಗೆ ದಂಡ ವಿಧಿಸಲಾಗಿದೆ ಎಂದು ಅವರು ಹೇಳಿದರು. ಕೇರಳದಲ್ಲಿ ಶವರ್ಮಾ ಸೇವಿಸಿ ವಿದ್ಯಾರ್ಥಿನಿಯೊಬ್ಬರು ಮೃತಪಟ್ಟು ಸುಮಾರು 58 ಮಂದಿ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಸಚಿವರ ಈ ಹೇಳಿಕೆ ಬಂದಿದೆ.