ನವದೆಹಲಿ: ದೇಶದ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಅಗತ್ಯ ಪ್ರಮಾಣದ ಕಲ್ಲಿದ್ದಲಿನ ದಾಸ್ತಾನು ಇಲ್ಲದಿರುವುದು ಬರುವ ಜುಲೈ-ಆಗಸ್ಟ್‌ನಲ್ಲಿ ಮತ್ತೊಮ್ಮೆ ವಿದ್ಯುತ್ ಸಮಸ್ಯೆಗೆ ಕಾರಣವಾಗಬಹುದು ಎಂದು ಸೆಂಟರ್ ಫಾರ್ ರಿಸರ್ಚ್ ಆನ್ ಎನರ್ಜಿ ಆಯಂಡ್ ಕ್ಲೀನ್ ಏರ್ಸ್ (ಸಿಆರ್‌ಇಎ) ಎಂಬ ಸಂಸ್ಥೆ ಹೇಳಿದೆ.

ಇಂಧನ ಕ್ಷೇತ್ರ ಹಾಗೂ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಶೋಧನೆ ನಡೆಸುವ ಸ್ವತಂತ್ರ ಸಂಸ್ಥೆಯಾದ ಸಿಆರ್‌ಇಎ, ಇತ್ತೀಚಿನ ತನ್ನ ವರದಿಯಲ್ಲಿ ಈ ಮಾಹಿತಿ ನೀಡಿದೆ.
'ಅಧಿಕೃತವಾಗಿ ಲಭ್ಯವಿರುವ ಮಾಹಿತಿಯನ್ನು ಕ್ರೋಡೀಕರಿಸಿ ಈ ಅಭಿಪ್ರಾಯಕ್ಕೆ ಬರಲಾಗಿದೆ. ಬರುವ ದಿನಗಳಲ್ಲಿ ವಿದ್ಯುತ್ ಬೇಡಿಕೆಯಲ್ಲಿ ಸ್ವಲ್ಪವೇ ಹೆಚ್ಚಳ ಕಂಡುಬಂದರೂ, ಅದಕ್ಕೆ ಸ್ಪಂದಿಸುವ ಸ್ಥಿತಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳು ಇಲ್ಲ' ಎಂದು ಸಿಆರ್‌ಇಎ ಹೇಳಿದೆ.
'ಸಂಭಾವ್ಯ ಸಮಸ್ಯೆಯನ್ನು ಎದುರಿಸುವ ಸಲುವಾಗಿ, ಉಷ್ಣ ವಿದ್ಯುತ್ ಸ್ಥಾವರಗಳಿಗೆ ಅಗತ್ಯಪ್ರಮಾಣದ ಕಲ್ಲಿದ್ದಲನ್ನು ಪೂರೈಸಲು ಕ್ರಮ ಕೈಗೊಳ್ಳುವ ಅಗತ್ಯವಿದೆ. ನೈರುತ್ಯ ಮುಂಗಾರಿನ ಆರಂಭವು ಕಲ್ಲಿದ್ದಲಿನ ಗಣಿಗಾರಿಕೆ ಹಾಗೂ ಸಾಗಣೆ ಮೇಲೆ ಪರಿಣಾಮವನ್ನುಂಟು ಮಾಡಲಿದೆ. ದೇಶದ ಸ್ಥಾವರಗಳಲ್ಲಿನ ದಾಸ್ತಾನು ಖಾಲಿಯಾಗುತ್ತಿರುವಂತೆಯೇ, ಕಲ್ಲಿದ್ದಲನ್ನು ಮರುಭರ್ತಿ ಮಾಡದೇ ಇದ್ದರೆ ವಿದ್ಯುತ್ ಸಮಸ್ಯೆ ಕಾಡಲಿದೆ' ಎಂದೂ ಪ್ರತಿಪಾದಿಸಿದೆ.
ಇತ್ತೀಚೆಗೆ ದೇಶದಲ್ಲಿ ಕಂಡುಬಂದಿದ್ದ ವಿದ್ಯುತ್ ಸಮಸ್ಯೆಗೆ ಕಲ್ಲಿದ್ದಲ್ಲಿನ ಉತ್ಪಾದನೆಯೇ ಕಾರಣವಾಗಿರಲಿಲ್ಲ. ಅದರ ವಿತರಣೆ ಹಾಗೂ ಆಡಳಿತ ವ್ಯವಸ್ಥೆಯ ಉದಾಸೀನತೆಯೇ ಕಾರಣವಾಗಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.
ಪ್ರಸ್ತುತ, ದೇಶದ ವಿದ್ಯುತ್ ಸ್ಥಾವರಗಳಲ್ಲಿ 2.7 ಕೋಟಿ ಟನ್ ಕಲ್ಲಿದ್ದಲು ಸಂಗ್ರಹ ಇದೆ. ಆಗಸ್ಟ್‌ನಲ್ಲಿ ಗರಿಷ್ಠ 214 ಗಿಗಾವಾಟ್‌ನಷ್ಟು ವಿದ್ಯುತ್‌ಗೆ ಬೇಡಿಕೆ ಕಂಡುಬರಬಹುದು ಎಂದು ಭಾರತ ಕೇಂದ್ರೀಯ ವಿದ್ಯುತ್ ಪ್ರಾಧಿಕಾರ (ಸಿಇಎ) ಅಂದಾಜಿಸಿದೆ.