ನವದೆಹಲಿ :ದೇಶದ್ರೋಹ ಕಾನೂನನ್ನು ಶನಿವಾರ ಸಮರ್ಥಿಸಿಕೊಂಡ ಕೇಂದ್ರವು ಅದನ್ನು ಪ್ರಶ್ನಿಸಿರುವ ಅರ್ಜಿಗಳನ್ನು ವಜಾಗೊಳಿಸುವಂತೆ ಸರ್ವೋಚ್ಚ ನ್ಯಾಯಾಲಯವನ್ನು ಕೇಳಿಕೊಂಡಿತು. ವಸಾಹತುಶಾಹಿ ಯುಗದ ದೇಶದ್ರೋಹ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯವು ಕೈಗೆತ್ತಿಕೊಂಡಿದೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಮೂವರು ನ್ಯಾಯಾಧೀಶರ ಪೀಠಕ್ಕೆ ಸಲ್ಲಿಸಿದ ಲಿಖಿತ ಹೇಳಿಕೆಯಲ್ಲಿ ಕೇದಾರನಾಥ ಸಿಂಗ್ ವಿರುದ್ಧ ಬಿಹಾರ ರಾಜ್ಯ ಪ್ರಕರಣದಲ್ಲಿ ದೇಶದ್ರೋಹ ಕಾನೂನನ್ನು ಎತ್ತಿ ಹಿಡಿದು ಸರ್ವೋಚ್ಚ ನ್ಯಾಯಾಲಯವು ನೀಡಿರುವ ತೀರ್ಪಿಗೆ ಬದ್ಧರಾಗಿರಬೇಕಾಗುತ್ತದೆ ಎಂದು ಕೇಂದ್ರವು ತಿಳಿಸಿದೆ.
ಕಾನೂನಿನ ಸಿಂಧುತ್ವವನ್ನು ಮೂವರು ನ್ಯಾಯಾಧೀಶರ ಪೀಠವು ಪರಿಶೀಲಿಸುವಂತಿಲ್ಲ. ಸಂವಿಧಾನ ಪೀಠವೊಂದು ಈಗಾಗಲೇ ಸಮಾನತೆಯ ಹಕ್ಕು ಮತ್ತು ಜೀವನದ ಹಕ್ಕಿನಂತಹ ಮೂಲಭೂತ ಹಕ್ಕುಗಳಿಗೆ ಸಂಬಂಧಿಸಿದಂತೆ 124 ಎ ಕಲಮ್ (ದೇಶದ್ರೋಹ ಕಾನೂನು)ನ ಎಲ್ಲ ಅಂಶಗಳನ್ನು ಪರೀಕ್ಷಿಸಿದೆ ಎಂದು ಕೇಂದ್ರವು ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ (ಇಜಿಐ) ಮತ್ತು ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿದಂತೆ ಐವರು ಕಕ್ಷಿದಾರರು ದೇಶದ್ರೋಹ ಕಾನೂನನ್ನು ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ,ನ್ಯಾಯಮೂರ್ತಿಗಳಾದ ಸೂರ್ಯಕಾಂತ ಮತ್ತು ಹಿಮಾ ಕೊಹ್ಲಿ ಅವರ ಮೂವರು ನ್ಯಾಯಾಧೀಶರ ವಿಶೇಷ ಪೀಠವು ಮಂಗಳವಾರ ದೇಶದ್ರೋಹ ಕಾನೂನನ್ನು ಪ್ರಶ್ನಿಸಿರುವ ಅರ್ಜಿಗಳ ವಿಚಾರಣೆಯನ್ನು ನಡೆಸಲಿದೆ.
ದೇಶದ್ರೋಹ ಕಾನೂನಿನ ಭಾರೀ ದುರುಪಯೋಗದ ಬಗ್ಗೆ ಕಳೆದ ವರ್ಷದ ಜುಲೈನಲ್ಲಿ ಕಳವಳವನ್ನು ವ್ಯಕ್ತಪಡಿಸಿದ್ದ ಸರ್ವೋಚ್ಚ ನ್ಯಾಯಾಲಯವು,ಸ್ವಾತಂತ್ರ ಆಂದೋಲನವನ್ನು ದಮನಿಸಲು ಮಹಾತ್ಮಾ ಗಾಂಧಿಯವರಂತಹ ವ್ಯಕ್ತಿಗಳ ಧ್ವನಿಯನ್ನಡಗಿಸಲು ಬ್ರಿಟಿಷರು ಬಳಸುತ್ತಿದ್ದ ಈ ಕಾನೂನನ್ನು ಏಕೆ ರದ್ದುಗೊಳಿಸುತ್ತಿಲ್ಲ ಎಂದು ಕೇಂದ್ರವನ್ನು ಪ್ರಶ್ನಿಸಿತ್ತು.