ಅಮರಾವತಿ: ‘ಅಸನಿ’ ಚಂಡಮಾರುತದ ಪ್ರಭಾವಕ್ಕೆ ಸಿಲುಕಿರುವ ಆಂಧ್ರ ಪ್ರದೇಶದಲ್ಲಿ ಭಾರಿ ಬಿರುಗಾಳಿ ಸಹಿತ ಮಳೆಯಾಗುತ್ತಿದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಇದೇ ಅಬ್ಬರದ ಅಲೆಗಳಲ್ಲಿ ಚಿನ್ನದ ಬಣ್ಣದ ರಥವೊಂದು ತೇಲಿ ಬಂದಿದೆ.
ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ ಸೃಷ್ಟಿಯಾಗಿರುವ ಅಸನಿ ಚಂಡಮಾರುತ ಆಂಧ್ರ ಪ್ರದೇಶದಲ್ಲಿ ಭಾರಿ ಮಳೆಗೆ ಕಾರಣವಾಗಿದ್ದು, ಆಂಧ್ರ ಪ್ರದೇಶದ ಶ್ರೀಕಾಕುಳಂ, ಕಾಕಿನಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಸಮುದ್ರ ಪ್ರಕ್ಷುಬ್ಧವಾಗಿರುವ ಹಿನ್ನೆಲೆಯಲ್ಲಿ ನಿಗೂಢ ಚಿನ್ನದ ಬಣ್ಣದ ರಥವೊಂದು ಶ್ರೀಕಾಕುಳಂನ ಸುನ್ನಪಲ್ಲಿ ಬಂದರಿನ ದಡಕ್ಕೆ ಬಂದು ತಲುಪಿದೆ.
ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ದಡಕ್ಕೆ ಬಂದ ರಥವನ್ನು ಮೀನುಗಾರು ಹಾಗೂ ಸ್ಥಳೀಯರು ದಡಕ್ಕೆ ಎಳೆದು ತಂದು ಕುತೂಹಲದಿಂದ ವೀಕ್ಷಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
‘ಈ ರಥ ಬೇರೆ ದೇಶದಿಂದ ಬಂದಿರಬಹುದು. ಇದರ ಬಗ್ಗೆ ನಾವು ಗುಪ್ತಚರ ಮತ್ತು ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ’ ಎಂದು ಎಸ್‌ಐ ನೌಪಾದ ಹೇಳಿದ್ದಾರೆ.