ಕೋವಿಡ್-19 ಸಾಂಕ್ರಾಮಿಕದ ಕಾರಣದಿಂದ ಎರಡು ವರ್ಷ ಸ್ಥಗಿತಗೊಂಡಿದ್ದ ಸೇನಾ ನೇಮಕಾತಿ ಪ್ರಕ್ರಿಯೆ ಪುನರಾರಂಭವಾಗುವ ನಿರೀಕ್ಷೆ ಇದೆ. ಅಲ್ಪಾವಧಿ ಸೇವೆಗೆ ಸೈನಿಕರನ್ನು ನೇಮಕ ಮಾಡಿಕೊಳ್ಳುವ 'ಟೂರ್ ಆಫ್ ಡ್ಯೂಟಿ' ಹೆಸರಿನ ನೇಮಕಾತಿ ನೀತಿಯನ್ನು ಅಂತಿಮಪಡಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ ಎಂದು hindustantimes.com ವರದಿ ಮಾಡಿದೆ.
ನೇಮಕಾತಿಯ ವೇಳಾಪಟ್ಟಿಯನ್ನು ನಿಗದಿಪಡಿಸಲಾಗುತ್ತಿದ್ದು, ಆಗಸ್ಟ್‍ನಿಂದ ಡಿಸೆಂಬರ್ ನಡುವೆ ನೇಮಕಾತಿ ರ್ಯಾಲಿಗಳನ್ನು ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಸೇನೆಯ ಸರ್ವಸನ್ನದ್ಧತೆಗೆ ಸೇನಾ ಸಿಬ್ಬಂದಿ ಕೊರತೆ ಅಡ್ಡಿಯಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ಎಲ್ಲ ಸೇನಾ ಘಟಕಗಳು ಕ್ಲಪ್ತವಾಗಿ ಕಾರ್ಯ ನಿರ್ವಹಿಸುತ್ತಿವ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹೊಸ ನೇಮಕಾತಿ ನೀತಿಯನ್ನು ಘೋಷಿಸುವ ಮುನ್ನ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಟೂರ್ ಆಫ್ ಡ್ಯೂಟಿ ಮಾದರಿಯು ಅಧಿಕಾರಿ ಹುದ್ದೆಗಿಂತ ಕೆಳಗಿನ ಹುದ್ದೆಗಳಿಗೆ ಆರು ತಿಂಗಳ ತರಬೇತಿ ಸೇರಿದಂತೆ ನಾಲ್ಕು ವರ್ಷಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲಿದೆ ಎಂದು ತಿಳಿದು ಬಂದಿದೆ.