ಮುಳ್ಳೇರಿಯ: ವಿದ್ವಾಂಸರಾಗಿ, ಅಧ್ಯಾಪಕರಾಗಿ, ಕಲಾವಿದರಾಗಿ ಸಮಾಜಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟು ಬದುಕಿದ ಪುಂಡೂರು ರಾಜಗೋಪಾಲ ಪುಣಿಚಿತ್ತಾಯರು ಶ್ರೀಮದ್ ಎಡನೀರು ಮಠದೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಪೂಜ್ಯ ಕೇಶವಾನಂದ ಭಾರತೀ ಶ್ರೀಗಳ ಆಪ್ತ ಶಿಷ್ಯರಾಗಿ ಮಠದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಪುಣಿಚಿತ್ತಾಯರ ಬದುಕು-ಬರಹ, ಸಾಧನೆಗಳ ಕುರಿತಾದ ಪುಸ್ತಕ ಪ್ರಕಟಗೊಳ್ಳುತ್ತಿರುವುದು ಸಂತಸ ತಂದಿದೆ. ಸಾಧಕರ ಪರಿಚಯಾತ್ಮಕ ಹೊತ್ತಗೆಗಳು ಹೊಸ ತಲೆಮಾರಿಗೆ ಮಾರ್ಗದರ್ಶಿ ಎಂದು ಶ್ರೀಮದ್ ಎಡನೀರು ಮಠಾಧೀಶ ಶ್ರೀಸಚ್ಚಿದಾನಂದ ಭಾರತೀ ಶ್ರೀಗಳು ಆಶೀರ್ವಚನ ನೀಡಿದರು.
ರಾಜಗೋಪಾಲ ಪುಣಿಚಿತ್ತಾಯರ ಬದುಕು,ಸಾಧನೆಗಳನ್ನು ಆಧರಿಸಿದ ಪ್ರತಿಭಾ ಪುಂಜ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದರು.
ಕೃತಿಯ ಲೇಖಕ, ಸಂಪಾದಕ ಡಾ.ಬೇ.ಸಿ.ಗೋಪಾಲಕೃಷ್ಣ ಭಟ್ ಉಪಸ್ಥಿತರಿದ್ದರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅಧ್ಯಕ್ಷತೆ ವಹಿಸಿದ್ದರು. ದಿ.ಪುಣಿಚಿತ್ತಾಯರ ಬಗ್ಗೆ ಬೆಳ್ಳಿಗೆ ನಾರಾಯಣ ಮಣಿಯಾಣಿ ಅವರು ಸಂಸ್ಮರಣಾ ಭಾಷಣ ಮಾಡಿದರು. ಕುಂಡಲ ವಿಷ್ಣು ಆಚಾರ್ಯ, ಉಪ್ಪಂಗಳ ವೆಂಕಟರಮಣ, ಟಿ.ಶ್ರೀಪತಿ ಅವರನ್ನು ಗೌರವಿಸಲಾಯಿತು. ಪುಸ್ತಕ ರಚನೆಯಲ್ಲಿ ಕಾಳಜಿ ವಹಿಸಿದ ಉಪನ್ಯಾಸಕ ಸತ್ಯಮೂರ್ತಿ ಬಂದ್ಯೋಡು, ನಿವೃತ್ತ ಶಿಕ್ಷಕ, ಚಿತ್ರಕಲಾವಿದ ಮಧುಸೂದನ ನಡ್ವಂತಿಲಾಯ ಮುನಿಯೂರು, ಗಣೇಶ ಪ್ರಸಾದ ಪಾಣೂರು ಅವರನ್ನೂ ಗೌರವಿಸಲಾಯಿತು. ಲಕ್ಷ್ಮೀಕಾಂತ ಪುಣಿಚಿತ್ತಾಯ ಸ್ವಾಗತಿಸಿ, ರೂಪೇಶ ಕುಮಾರ್ ಪುಣಿಚಿತ್ತಾಯ ವಂದಿಸಿದರು. ಪ್ರೊ.ಪುರುಷೋತ್ತಮ ಪುಣಿಚಿತ್ತಾಯ ನಿರೂಪಿಸಿದರು. ವಾಸುದೇವ ಪುಣಿಚಿತ್ತಾಯ ಪ್ರಾರ್ಥನೆ ಹಾಡಿದರು. ರಾಮಚಂದ್ರ ಪುಣಿಚಿತ್ತಾಯ ಅಭಿನಂದನಾ ಪತ್ರ ವಾಚಿಸಿದರು.