ಕಾಸರಗೋಡು: ಕೇಂದ್ರೀಯ ವಿಶ್ವವಿದ್ಯಾಲಯದ ಆಡಳಿತ ಮತ್ತು ಕಾರ್ಯನಿರ್ವಹಣೆಯನ್ನು ಅಧ್ಯಯನ ಮಾಡುವ ನಿಟ್ಟಿನಲ್ಲಿ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಕಾಸರಗೋಡು ಪೆರಿಯ ಕ್ಯಾಂಪಸ್‍ಗೆ ಕೇರಳ ಆಡಳಿತ ಸೇವೆಯ (ಕೆಎಎಸ್) ಅಧಿಕಾರಿಗಳ ತಂಡ ಭೇಟಿ ನೀಡಿದರು. ಒಂದು ವರ್ಷದ ತರಬೇತಿಯ ಅಂಗವಾಗಿ 'ಕೇರಳ ದರ್ಶನ ಕಾರ್ಯಕ್ರಮ'ದನ್ವಯ 34 ಜನರ ತಂಡ ಪೆರಿಯಾ ಕ್ಯಾಂಪಸ್‍ಗೆ ಆಗಮಿಸಿತ್ತು.
ಅಧಿಕಾರಿಗಳ ತಂಡ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಕುಲಸಚಿವ ಡಾ.ಎನ್.ಸಂತೋಷ್ ಕುಮಾರ್ ಆಡಳಿತಾತ್ಮಕ ವಿಷಯಗಳನ್ನು ವಿವರಿಸಿದರು. ಪರೀಕ್ಷಾ ನಿಯಂತ್ರಕ ಡಾ.ಎಂ.ಮುರಳೀಧರನ್ ನಂಬಿಯಾರ್ ಅವರು ದಾಖಲಾತಿ ವಿಧಾನಗಳು ಮತ್ತು ಪರೀಕ್ಷೆಯ ನಡವಳಿಕೆಯನ್ನು ವಿವರಿಸಿದರು. ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಜೈವಿಕ ರಸಾಯನಶಾಸ್ತ್ರ ಮತ್ತು ಆನ್ವಿಕ ಜೀವಶಾಸ್ತ್ರ ವಿಭಾಗದ ಅಧ್ಯಕ್ಷ ಡಾ.ರಾಜೇಂದ್ರ ಪಿಲಾಂಕಟ್ಟೆ ಮಾಹಿತಿ ನೀಡಿದರು. ಕೋವಿಡ್ ತಪಾಸಣೆ ಸೇರಿದಂತೆ ವಿಶ್ವವಿದ್ಯಾನಿಲಯದ ಸಮಾಜ ಸೇವಾ ಕಾರ್ಯ, ಸಂಶೋಧನೆ ಮತ್ತು ಅಭಿವೃದ್ಧಿಯಂತಹ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು. ಕೆ.ಎ.ಎಸ್ ಅಧಿಕಾರಿಗಳ ಪ್ರಶ್ನೆಗಳಿಗೆ ಕಾಲೇಜಿನ ಅಧಿಕಾರಿಗಳು ಉತ್ತರಿಸಿದರು. ಸಹಾಯಕ ಕುಲಸಚಿವ ಸುರೇಶ್ ಕಂದಂ ಉಪಸ್ಥಿತರಿದ್ದರು. ಮುಂದಿನ ದಿನಗಳಲ್ಲಿ ಇನ್ನೂ ಎರಡು ಬ್ಯಾಚ್‍ಗಳು ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿರುವುದಾಗಿ ಪ್ರಕಟಣೆ ತಿಳಿಸಿದೆ.