ಛತ್ರಪುರ್: ಮಧ್ಯಪ್ರದೇಶದಲ್ಲಿ ನಡೆದ ಈ ಘಟನೆ ಯಾವುದೇ ಕ್ರೈಂ ಥ್ರಿಲ್ಲರ್ ಸಿನಿಮಾ ಕಥೆಗಳಿಗಿಂತ ಕಡಿಮೆ ಏನೂ ಇಲ್ಲ. ವ್ಯಕ್ತಿಯೊಬ್ಬ ತನ್ನ ಮಾಲೀಕನ ಸುಮಾರು ₹6 ಲಕ್ಷ ಹಣ ದೋಚಿ, ಸತ್ತಂತೆ ನಟಿಸಿ, ಇದೀಗ ಪೊಲೀಸ್ ಅಥಿತಿಯಾಗಿದ್ದಾನೆ.
ಕಳೆದ ವರ್ಷ ಜುಲೈ 16 ರಂದು ಛತ್ರಪುರ್ ಜಿಲ್ಲೆಯ ಭಮಿತಾ ಪೊಲೀಸ್ ಠಾಣೆಯಲ್ಲಿ ಪ್ರಕರಣವೊಂದು ದಾಖಲಾಗುತ್ತದೆ.
ದೂರು ದಾಖಲಿಸಿಕೊಂಡ ಭಮಿತಾ ಪೊಲೀಸ್ ಠಾಣೆಯ ಪೊಲೀಸರು ತನಿಖೆ ಕೈಗೊಳ್ಳುತ್ತಾರೆ. ಆದರೆ, ನಾಮದೇವ್ ಹಾಗೂ ಹಣದ ಬಗ್ಗೆ ಸುಳಿವು ಸಿಗುವುದಿಲ್ಲ.
ಬಳಿಕ ಜುಲೈ 24 ರಂದು ಭಮಿತಾ ವ್ಯಾಪ್ತಿಯ ಪಾಳು ಕಟ್ಟಡವೊಂದರ ಬಳಿ ಸುಟ್ಟು ಕರಕಲಾದ ಶವ ಹಾಗೂ ಅರೆಬರೆ ಸುಟ್ಟ ಒಮಿನಿ ವಾಹನ ಸಿಗುತ್ತದೆ. ಪೊಲೀಸರು ಈ ಬಗ್ಗೆ ಪರಿಶೀಲಿಸಿ ಪತ್ರಿಕೆಗಳಲ್ಲಿ ಅನಾಮಧೇಯ ಶವ ಪತ್ತೆ ಎಂದು ನೋಟಿಸ್ ಕಳಿಸುತ್ತಾರೆ.
ನಂತರ ಶವ ಹುಡುಕಿಕೊಂಡು ಪೊಲೀಸರ ಬಳಿ ಬಂದ ನಾಮದೇವ ಕುಟುಂಬದವರು ಅದು ನಾಮದೇವನೇ ಎಂದು ಖಚಿತಪಡಿಸುತ್ತಾರೆ ಮತ್ತು ಅವರೇ ಅಂತ್ಯಕ್ರಿಯೆ ನಡೆಸುತ್ತಾರೆ. ಆದರೆ, ನಾಮದೇವ ಬಳಿ ಇದ್ದ ಹಣ ಎಲ್ಲಿ ಹೋಯಿತು? ಎಂದು ಪೊಲೀಸರು ಚಿಂತಾಕ್ರಾಂತರಾಗುತ್ತಾರೆ. ಏಕೆಂದರೆ ಕಾರ್ ಬಳಿ ಹಣ ಸುಟ್ಟು ಹೋಗಿರುವ ಕುರುಹುಗಳು ಪೊಲೀಸರಿಗೆ ಕಾಣಿಸಿರುವುದಿಲ್ಲ.
ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿರುವಾಗ ಏತನ್ಮಧ್ಯೆ ಸುಧೀರ್ ಅಗರವಾಲ್ ಅವರಿಗೆ ಕಳೆದ ಮೇ 3 ರಂದು ಛತ್ರಪುರ್ ಜಿಲ್ಲೆಯ ಗಢಾ ತಿಗಡದ ಭಗೇಶ್ವರ್ ಮಂದಿರದಲ್ಲಿ ವ್ಯಕ್ತಿಯೊಬ್ಬ ವೇಷ ಮರಿಸಿಕೊಂಡು ಅಲೆದಾಡುತ್ತಿರುವುದು ಕಂಡು ಬರುತ್ತದೆ. ಆ ವ್ಯಕ್ತಿಯನ್ನು ನೋಡಿ ಅನುಮಾನಗೊಂಡ ಅಗರವಾಲ್, ಪೊಲೀಸರಿಗೆ ಮಾಹಿತಿ ನೀಡುತ್ತಾರೆ.
ಬಳಿಕ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದರೂ, 'ತಾನು ಈ ಪ್ರಕರಣದಲ್ಲಿ ತಪ್ಪು ಮಾಡಿಲ್ಲ, ಅಮಾಯಕ, ನಾನೇ ಬೇರೆ, ನಾಮದೇವನೇ ಬೇರೆ' ಎಂದು ಪೊಲೀಸರೊಂದಿಗೆ ವಾದ ಮಾಡುತ್ತಾನೆ. ಬಳಿಕ ಪಾಳು ಕಟ್ಟಡದಲ್ಲಿ ದೊರೆತಿದ್ದ ಶವದ ಡಿಎನ್‌ಎ ಪರೀಕ್ಷೆ ನಡೆಸಿ ಅಲ್ಲಿ ಸತ್ತಿದ್ದು ನಾಮದೇವ್ ಅಲ್ಲ ಎಂದು ಪೊಲೀಸರು ಖಚಿತಪಡಿಸಿಕೊಂಡ ಮೇಲೆ ನಾಮದೇವನ ಬಣ್ಣ ಬಯಲಾಗುತ್ತದೆ.
'ಬಂಧಿತ ನಾಮದೇವನಿಂದ ₹5 ಲಕ್ಷ ಹಣ ವಶಪಡಿಸಿಕೊಂಡು ಪ್ರಕರಣದ ಬಗ್ಗೆ ವಿಸ್ತೃತ ತನಿಖೆ ನಡೆಸುತ್ತಿದ್ದೇವೆ. ನಾಮದೇವನೇ ಅಗರ್‌ವಾಲ್ ಅವರ ಹಣ ದೋಚಲು ಈ ಪ್ರಯತ್ನ ಮಾಡಿದ್ದ' ಎಂದು ಭಮಿತಾ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಮನಮೋಹನ್ ಸಿಂಗ್ ಭಗೇಲ್ ತಿಳಿಸಿದ್ದಾರೆ.