ತಿರುವನಂತಪುರ: ತಿರುವನಂತಪುರಂನಲ್ಲಿ ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಸಿ ಜಾರ್ಜ್ ಗೆ ನೀಡಲಾಗಿದ್ದ ಜಾಮೀನು ರದ್ದುಗೊಳಿಸಲಾಗಿದೆ. ತಿರುವನಂತಪುರಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಜಾಮೀನು ರದ್ದುಗೊಳಿಸಿದೆ. ಜಾಮೀನು ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂಬ ಪ್ರಾಸಿಕ್ಯೂಷನ್ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿದೆ. ಜಾಮೀನು ರದ್ದತಿ ವೇಳೆ ಪಿಸಿ ಜಾರ್ಜ್ ಅವರನ್ನು ಬಂಧಿಸುವಂತೆ ಪೋರ್ಟ್ ಸಹಾಯಕ ಪೋಲೀಸ್ ಆಯುಕ್ತರಿಗೆ ನ್ಯಾಯಾಲಯ ಸೂಚಿಸಿದೆ.
ತಿರುವನಂತಪುರದಲ್ಲಿ ನಡೆದ ಹಿಂದೂ ಮಹಾಸಮ್ಮೇಳನದಲ್ಲಿ ಜಾರ್ಜ್ ಅವರು ಮಾಡಿದ ಭಾಷಣ ವಿವಾದಕ್ಕೀಡಾಗಿತ್ತು. ನಂತರ ಪೋರ್ಟ್ ಪೊಲೀಸರು ಸ್ವಯಂ ಪ್ರೇರಿತವಾಗಿ ಪಿಸಿ ಜಾರ್ಜ್ ವಿರುದ್ಧ ಜಾಮೀನು ರಹಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ನಂತರ ಜಾರ್ಜ್ ಅವರನ್ನು ಎರಟ್ಟುಪೆಟ್ಟಾದಲ್ಲಿನ ಅವರ ಮನೆಯಿಂದ ಬಂಧಿಸಲಾಯಿತು. ಆದರೆ ಕೆಲವೇ ಗಂಟೆಗಳಲ್ಲಿ ಪಿಸಿ ಜಾರ್ಜ್ ಜಾಮೀನಿನ ಮೇಲೆ ಬಿಡುಗಡೆಗೊಂಡರು. ಜಾಮೀನು ರದ್ದು ಕೋರಿ ಪ್ರಾಸಿಕ್ಯೂಷನ್ ಮತ್ತು ಪೋಲೀಸರು ನ್ಯಾಯಾಲಯದ ಮೊರೆ ಹೋಗಿದ್ದರು.
ನಂತರ ಪ್ರಾಸಿಕ್ಯೂಷನ್ ಪಿಸಿ ಜಾರ್ಜ್ ಹೆಸರಿನಲ್ಲಿ ದಾಖಲಾದ ದ್ವೇಷ ಭಾಷಣದ ಪ್ರಕರಣವನ್ನು ನ್ಯಾಯಾಲಯಕ್ಕೆ ತಿಳಿಸಿತು. ಭಾಷಣದ ಸಿಡಿಯನ್ನೂ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಯಿತು. ಇದೇ ವೇಳೆ, ರಾಜಕೀಯ ಕುತಂತ್ರದ ಭಾಗವಾಗಿ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಿಸಿ ಜಾರ್ಜ್ ಕಿಡಿಕಾರಿದರು. ನ್ಯಾಯಾಲಯವು ಅಂತಿಮವಾಗಿ ಸಿಡಿ ಮತ್ತು ವಾದಗಳನ್ನು ಪರಿಶೀಲಿಸಿ ಜಾರ್ಜ್ ಗೆ ನೀಡಲಾಗಿದ್ದ ಜಾಮೀನು ರದ್ದುಪಡಿಸಿದೆ. ಜಾಮೀನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಪಿಡಿಪಿ ಕಾರ್ಯಕರ್ತರು ಪಲರಿವಟ್ಟಂ ಪೋಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.