ನವದೆಹಲಿ: ಲಂಡನ್ ನಲ್ಲಿ ಬ್ರಿಟಿಷ್ ಲೇಬರ್ ಪಕ್ಷದ ಮುಖಂಡ ಜೆರೆಮಿ ಕಾರ್ಬಿನ್ ಅವರನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಭೇಟಿಯಾಗಿರುವುದನ್ನು ಬಿಜೆಪಿ ಪ್ರಶ್ನಿಸುವುದರೊಂದಿಗೆ ವಿವಾದವಾಗಿ ಪರಿಣಮಿಸಿದೆ. ಯುಕೆ ಪ್ರತಿಪಕ್ಷ ಮುಖಂಡನ ಭಾರತ ವಿರೋಧಿ ಅಭಿಪ್ರಾಯಗಳನ್ನು ರಾಹುಲ್ ಗಾಂಧಿ ಒಪ್ಪಿಕೊಂಡಿದ್ದಾರೆಯೇ ಎಂದು ಬಿಜೆಪಿ ಕೆಣಕಿದೆ.
ರಾಹುಲ್ ಗಾಂಧಿ ಜೊತೆಗಿನ ಸಭೆಯನ್ನು ಕಾಂಗ್ರೆಸ್ ಸಮರ್ಥಿಸಿಕೊಂಡಿದ್ದು, ಕಾರ್ಬಿನ್ ಮೋದಿ ಅವರೊಂದಿಗೆ ಫೋಟೋವನ್ನು ಹಂಚಿಕೊಂಡಿದ್ದು, ಯುಕೆ ಕಾರ್ಮಿಕ ಮುಖಂಡರ ಭಾರತ ವಿರೋಧಿ ಅಭಿಪ್ರಾಯಗಳನ್ನು ಮೋದಿ ಒಪ್ಪಿಕೊಂಡಿದ್ದಾರೆಯೇ ಎಂದು ಪ್ರಶ್ನಿಸಿದೆ.
ಸೋಮವಾರ ಲಂಡನ್ ಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ ಕಾರ್ಬಿನ್ ಅವರನ್ನು ಭೇಟಿಯಾಗಿದ್ದಾರೆ ಮತ್ತು ಇವರಿಬ್ಬರೊಂದಿಗೆ ಸ್ಯಾಮ್ ಪಿತ್ರೋಡಾ ಇರುವ ಚಿತ್ರವನ್ನು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಹಂಚಿಕೊಂಡಿದೆ. 2015 ರಿಂದ 2020 ರವರೆಗೆ ಲೇಬರ್ ಪಕ್ಷದ ಮುಖಂಡರಾಗಿ ಮತ್ತು ವಿರೋಧ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸಿದ ಕಾರ್ಬಿನ್ ಅವರು ಆಗಾಗ್ಗೆ ಭಾರತದ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಟ್ವೀಟರ್ ನಲ್ಲಿ ರಾಹುಲ್ ಗಾಂಧಿ ಕಾರ್ಬಿನ್ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿರುವ ಬಿಜೆಪಿ ಮುಖಂಡರಾದ ಕಿರಣ್ ರಿಜಿಜು, ಕಪಿಲ್ ಮಿಶ್ರಾ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ಕೂಡಾ ಕಾರ್ಬಿನ್ ಜೊತೆಗಿನ ಪೋಟೋವನ್ನು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಹಂಚಿಕೊಳ್ಳುವ ಮೂಲಕ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಭಾರತದ ಬಗ್ಗೆ ಜೆರೆಮಿ ಕಾರ್ಬಿನ್ ಅವರ ಅಭಿಪ್ರಾಯಗಳನ್ನು ಪ್ರಧಾನಿ ಕೂಡಾ ಒಪ್ಪಿಕೊಂಡಿದ್ದಾರೆ ಎಂದರ್ಥವೇ? ಎಂದು ಪ್ರಶ್ನಿಸಿದ್ದಾರೆ.