ಕೊಯಿಕ್ಕೋಡ್: ಸಲಿಂಗಕಾಮ ಅಪರಾಧವಲ್ಲ, ನಾವಿಬ್ಬರು ಒಟ್ಟಿಗೆ ಬಾಳಬೇಕು ಅವಕಾಶ ಮಾಡಿ ಕೊಡಿ ಎಂದು ಸಲಿಂಗ ಜೋಡಿವೊಂದು ತಮ್ಮ ಪ್ರೀತಿಗಾಗಿ ಹೋರಾಟ ಮಾಡುತ್ತಿರುವ ಪ್ರಸಂಗ ಕೇರಳದ ಕೊಯಿಕ್ಕೋಡ್ನಲ್ಲಿ ಬೆಳಕಿಗೆ ಬಂದಿದೆ.
2018ರ ಸೆಪ್ಟೆಂಬರ್ 6ರಂದು ದೇಶದ ಉನ್ನತ ನ್ಯಾಯಾಲಯ ಸುಪ್ರೀಂಕೋರ್ಟ್ ಎಲ್ಜಿಬಿಟಿಕ್ಯೂ ಹಕ್ಕನ್ನು ಎತ್ತಿಹಿಡಿದೆ.
ಅಲುವಾ ಮೂಲದ ಆಧಿಲಾ ನಸ್ರಿನ್ (22) ಮತ್ತು ಕೊಯಿಕ್ಕೋಡ್ ಮೂಲದ ಫಾತಿಮಾ ನೋರಾ (23) ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ. ಆದರೆ, ಎರಡು ಕುಟುಂಬ ಇಬ್ಬರ ಸಲಿಂಗಕಾಮಕ್ಕೆ ಬಲವಾಗಿ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಇಬ್ಬರು ಒಟ್ಟಿಗೆ ಬಾಳಲು ಸಾಕಷ್ಟು ಹೋರಾಟ ನಡೆಸುತ್ತಿದ್ದು, ಪೊಲೀಸ್ ಇಲಾಖೆ ಮತ್ತು ನ್ಯಾಯಾಲಯದ ನೆರವು ಕೋರಿದ್ದಾರೆ.
ನೋರಾಳಿಂದ ತನ್ನನ್ನು ಬಲವಂತಾವಗಿ ದೂರ ಮಾಡಿದ್ದಕ್ಕೆ ಆಧಿಲಾ ಪೊಲೀಸರ ನೆರವು ಎದುರು ನೋಡುತ್ತಿದ್ದಾರೆ. ಅಲ್ಲದೆ, ಬದುಕುವುದಾದರೆ, ನೋರಾ ಜತೆಯಲ್ಲೇ ಎಂಬ ನಿರ್ಧಾರಕ್ಕೆ ಬಂದಿರುವ ಆಧಿಲಾ, ಮಾಧ್ಯಮದ ಮುಂದೆ ತನ್ನ ಕತೆಯನ್ನು ಬಿಚ್ಚಿಟ್ಟಿದ್ದಾಳೆ.
ಸೌದಿ ಅರೇಬಿಯಾದಲ್ಲಿ 11ನೇ ತರಗತಿ ಓದುವಾಗ ಆಧಿಲಾ, ನೋರಾಳನ್ನು ಭೇಟಿ ಮಾಡುತ್ತಾಳೆ. ಎಲ್ಲರಂತೆಯೇ ಇಬ್ಬರ ಸ್ನೇಹ ಆರಂಭವಾಗುತ್ತದೆ. ಆದರೆ, ದಿನ ಕಳೆದಂತೆ ಇಬ್ಬರ ಸ್ನೇಹ ಗಾಢವಾಗಿ ಮತ್ತೊಂದು ಮಜಲಿಗೆ ಹೊರಳುತ್ತದೆ. ಆಗ ಇಬ್ಬರದ್ದು ಸಲಿಂಗಕಾಮ ಎಂದು ಅರಿವಾಗುತ್ತದೆ. ಅಂದಿನಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ತುಂಬಾ ಹತ್ತಿರವಾಗುತ್ತಾರೆ. ಇಬ್ಬರ ಪಾಲಕರು ಕೂಡ ಫ್ರೆಂಡ್ಸ್ ಆಗಿರುವುದರಿಂದ ಆಧಿಲಾ ಮತ್ತು ನೋರಾಳನ್ನು ಉನ್ನತ ಶಿಕ್ಷಣಕ್ಕಾಗಿ ಕೊಯಿಕ್ಕೋಡ್ನಲ್ಲಿರುವ ಕಾಲೇಜಿಗೆ ಕಳುಹಿಸಲು ನಿರ್ಧಾರ ಮಾಡುತ್ತಾರೆ. ಶಿಕ್ಷಣ ಮುಗಿದ ಬಳಿಕವೂ ಉಳಿದ ಜೀವನವನ್ನು ಒಟ್ಟಿಗೆ ಕಳೆಯಬೇಕೆಂದು ನಿರ್ಧಾರ ಮಾಡುವ ಆಧಿಲಾ ಮತ್ತು ನೋರಾ, ಡಿಗ್ರಿ ಪೂರ್ಣಗೊಳಿಸಿದ ಬಳಿಕ ಇಬ್ಬರ ವಿಚಾರವನ್ನು ಕುಟುಂಬದ ಮುಂದೆ ಪ್ರಸ್ತಾಪಿಸಲು ತೀರ್ಮಾನಿಸುತ್ತಾರೆ.
ಇದರ ನಡುವೆ ಎರಡು ಕುಟುಂಬಕ್ಕೆ ಇಬ್ಬರ ಸಂಬಂಧದ ಬಗ್ಗೆ ತಿಳಿಯುತ್ತದೆ. ಬಳಿಕ ಒಂದೇ ಕಾಲೇಜಿಗೆ ಇಬ್ಬರನ್ನು ಸೇರಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತಾರೆ. ಇಬ್ಬರನ್ನು ಬೇರೆ ಬೇರೆ ಕಾಲೇಜಿಗೆ ಕಳುಹಿಸುತ್ತಾರೆ. ಇಬ್ಬರ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರುತ್ತಾರೆ. ಇಬ್ಬರ ಪ್ರೀತಿ ಕೊನೆಯಾಗುತ್ತದೆ ಎಂದು ಪಾಲಕರು ಭಾವಿಸುತ್ತಾರೆ. ಆದರೆ, ಇಬ್ಬರು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ ಬೆಳೆಸುತ್ತಾರೆ. ಅಲ್ಲದೆ, ಇಬ್ಬರು ಮತ್ತೆ ಭೇಟಿಯಾಗಿ, ಸಲಿಂಗ ಪ್ರೇಮಿಗಳು ಮತ್ತು ಸಲಿಂಗಕಾಮದ ಬಗ್ಗೆ ಹೆಚ್ಚು ಅರಿತುಕೊಂಡು ಒಟ್ಟಿಗೆ ವಾಸಿಸಲು ನಿರ್ಧರಿಸುತ್ತಾರೆ.
ನಿಮ್ಮ ಸಂಬಂಧ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ ಎಂದು ಪಾಲಕರು ಖಂಡಿಸುತ್ತಾರೆ. ಆದರೂ ತಮ್ಮ ಸಂಬಂಧವನ್ನು ಮುರಿದುಕೊಳ್ಳಲು ಇಬ್ಬರು ತಯಾರಿರುವುದಿಲ್ಲ. ಇದರ ನಡುವೆ ಇಬ್ಬರು ಮೇ 19ರಂದು ತಮ್ಮ ಮನೆಗಳನ್ನು ತೊರೆಯುತ್ತಾರೆ. ಆದರೆ, ಪಾಲಕರ ಕೈಗೆ ಮತ್ತೆ ಸಿಕ್ಕಿಬೀಳುತ್ತಾರೆ. ಇಬ್ಬರು ಕೊಯಿಕ್ಕೋಡ್‌ನ ಆಶ್ರಯಧಾಮದಲ್ಲಿ ಆಶ್ರಯ ಪಡೆದಿದ್ದರು. ಇಬ್ಬರು ಒಟ್ಟಿಗೆ ಬಾಳಲು ಅನುಮತಿ ನೀಡುವಾಗಿ ಭರವಸೆ ನೀಡಿ ನನ್ನನ್ನು ಆಶ್ರಯಧಾಮದಿಂದ ಪಾಲಕರು ಅಲುವಾಗೆ ಕರೆದೊಯ್ದರು ಎಂದು ಆಧಿಲಾ ಹೇಳಿದ್ದಾರೆ. ಆದರೆ, ಮನೆಯಲ್ಲಿ ಆಕೆಯ ಮೇಲೆ ಮಾಡಿದರು ಎಂದು ಆಧಿಲಾ ಆರೋಪ ಮಾಡಿದ್ದಾರೆ.
ಇದರ ನಡುವೆ ನನ್ನ ಮಗಳನ್ನು ಅಪಹರಿಸಿದ್ದಾಳೆ ಎಂದು ಆಧಿಲಾ ವಿರುದ್ಧ ನೋರಾ ಪಾಲಕರು ದೂರು ನೀಡುತ್ತಾರೆ. ಇತ್ತ ತನ್ನ ಕುಟುಂಬ ಸದಸ್ಯರಿಂದಲೇ ಆಧಿಲಾ ತೀವ್ರ ದೈಹಿಕ ಹಿಂಸೆಗೆ ಒಳಗಾಗಿರುತ್ತಾಳೆ. ಆದರೆ, ಹೇಗೋ ಪೊಲೀಸರ ಸಹಾಯದಿಂದ ಆಧಿಲಾ ಆಶ್ರಯ ಮನೆಗೆ ಮರಳುತ್ತಾಳೆ. ನೋರಾಳನ್ನು ಅವಳ ಹೆತ್ತವರು ಕರೆದುಕೊಂಡು ಹೋದ ನಂತರ ಒಮ್ಮೆ ಮಾತ್ರ ಆಕೆಯಯೊಂದಿಗೆ ಆಧಿಲಾ ಮಾತನಾಡಿರುತ್ತಾಳೆ. ಈ ವೇಳೆ ನೋರಾ, ಆಧಿಲಾ ಜತೆ ಬದುಕಲು ಬಯಸಿರುವುದಾಗಿ ಹೇಳುತ್ತಾಳೆ. ಅದಾದ ಬಳಿಕ ಎಲ್ಲ ಸಂಪರ್ಕವನ್ನು ಆಧಿಲಾ ಕಳೆದುಕೊಳ್ಳುತ್ತಾಳೆ. ಅಂತಿಮವಾಗಿ ಆಧಿಲಾ, ನೋರಾಗಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರುತ್ತಾಳೆ.
ನಮ್ಮ ಪಾಲಕರು ಮತ್ತು ಸಂಬಂಧಿಕರು ನನ್ನನ್ನು ಅಣಕಿಸುತ್ತಿದ್ದಾರೆ ಮತ್ತು ಸಲಿಂಗಕಾಮವು ಮಾನಸಿಕ ಅಸ್ವಸ್ಥತೆ ಎಂದು ತಿರಸ್ಕಾರದಿಂದ ನಡೆಸಿಕೊಳ್ಳುತ್ತಿದ್ದಾರೆ. ಸಲಿಂಗ ಜೋಡಿ ಒಟ್ಟಿಗೆ ಬಾಳುವುದನ್ನು ಬಹುತೇಕ ಜನರು ಸ್ವೀಕರಿಸುವುದಿಲ್ಲ. ನಾವಿಬ್ಬರು ಸಾಕಷ್ಟು ಭಾವನಾತ್ಮಕ ಹಾಗೂ ದೈಹಿಕ ಹಿಂಸೆಗೆ ಒಳಗಾಗಿದ್ದೇವೆ. ಬಯಸಿದರೆ ಸಲಿಂಗ ಜೋಡಿ ಒಟ್ಟಿಗೆ ಬಾಳಬಹುದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ ನಾವು ಒಟ್ಟಿಗೆ ಇರಲು ಯಾರೂ ಬಿಡುತ್ತಿಲ್ಲ. ನೊರಾ ಜತೆ ಮತ್ತೆ ಸೇರುತ್ತೇನೆ ಎಂಬ ಭರವಸೆ ಈಗಲೂ ಇದೆ ಎಂದು ಆಧಿಲಾ ಹೇಳಿದ್ದಾಳೆ. ಅಲ್ಲದೆ, ನೋರಾಳಿಗಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಆಧಿಲಾ, ನ್ಯಾಯಾಲಯದ ಮೆಟ್ಟಿಲೇರಲು ನಿರ್ಧಾರ ಮಾಡಿದ್ದಾಳೆ. ವಿಡಿಯೋ ಮೂಲಕವೂ ಆಧಿಲಾ ಮನದ ನೋವನ್ನು ಹೇಳಿಕೊಂಡಿದ್ದಾಳೆ.