ವಡೋದರಾ: ದಂಪತಿ ನಡುವೆ ಸಾಮರಸ್ಯ ಮೂಡದಿದ್ದರೆ ಪ್ರತ್ಯೇಕವಾಗುವುದು, ವಿಚ್ಛೇದನ ಕೊಡುವುದು ಮಾಮೂಲು. ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ದಂಪತಿ ಕನಿಷ್ಠ ಆರು ತಿಂಗಳು ಪ್ರತ್ಯೇಕವಾಗಿದ್ದರೋ ಎಂಬ ಬಗ್ಗೆ ಕೋರ್ಟ್ಗಳು ಗಮನಿಸುತ್ತವೆ.
ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ ದಂಪತಿಯೇ ಮೊದಲು ವಿಚಿತ್ರ ಒಪ್ಪಂದಕ್ಕೆ ಸಹಿ ಹಾಕಿದ್ದು, ಆ ವಿವಾದ ಇದೀಗ ಕೋರ್ಟ್ ಮೆಟ್ಟಿಲೇರಿದೆ.
ಇಂಥದ್ದೊಂದು ಘಟನೆ ನಡೆದಿರುವುದು ವಡೋದರಾದಲ್ಲಿ. ಒಟ್ಟಿಗೆ ಬಾಳಲು ಸಾಧ್ಯವೇ ಇಲ್ಲ ಎಂದಾಗ ಈ ದಂಪತಿ ಪರಸ್ಪರ ಒಂದು ವಿಚಿತ್ರ ಒಪ್ಪಂದಕ್ಕೆ ಸಹಿ ಹಾಕಿದ್ದು, ಅದೀಗ ಭಾರಿ ಸುದ್ದಿಯಾಗಿದೆ. ಅದೇನೆಂದರೆ ಮೊದಲು ಮೂರು ವರ್ಷ ಪ್ರತ್ಯೇಕವಾಗಿರೋಣ, ನಂತರ ಪ್ರತ್ಯೇಕವಾಗಿರಲು ಸಾಧ್ಯ ಎಂದಾದರೆ ನಂತರ ವಿಚ್ಛೇದನ ಪಡೆದುಕೊಳ್ಳೋಣ ಎಂಬ ಒಡಂಬಡಿಕೆ ಇದಾಗಿದ್ದು, ಇದಕ್ಕೆ ದಂಪತಿ ಸಹಿ ಹಾಕಿದ್ದಾರೆ. ಇದನ್ನು ನೋಟರಿಯ ಸಹಿ ಕೂಡ ಹಾಕಿಸಿದ್ದಾರೆ.
ಅದರೆ ಇಬ್ಬರ ನಡುವೆ ಕಲಹ ಏರ್ಪಟ್ಟು ಅದೀಗ ಕೋರ್ಟ್ ಬಾಗಿಲಿದೆ ಬಂದಿದೆ. ಆಗಿದ್ದೇನೆಂದರೆ, ವಡೋದರಾದ ಈ ದಂಪತಿ ಮದುವೆಯಾಗಿ 19 ವರ್ಷಗಳಾಗಿವೆ. ಇವರಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಕೆಲ ವರ್ಷಗಳ ಹಿಂದೆ ಇವರಿಬ್ಬರ ನಡುವೆ ಮನಸ್ತಾಪ ಬಂದು ಡಿವೋರ್ಸ್ ಪಡೆದುಕೊಳ್ಳಲು ಇಚ್ಛಿಸಿದರು. ಆದರೆ ಏಕಾಏಕಿ ಹೀಗೆ ಮಾಡುವ ಬದಲು ಮೊದಲು ಮೂರು ವರ್ಷ ಪ್ರತ್ಯೇಕವಾಗಿ ಇದ್ದು ನೋಡೋಣ ಎಂದುಕೊಂಡಿದ್ದಾರೆ. ಪ್ರತ್ಯೇಕವಾಗಿ ಒಬ್ಬರನ್ನೊಬ್ಬರು ಬಿಟ್ಟು ಇರಲು ಸಾಧ್ಯ ಎಂದಾದರೆ ನಂತರ ವಿಚ್ಛೇದನ ಪಡೆದುಕೊಳ್ಳೋಣ ಎಂದು ದಾಖಲಿಸಿ ಅದಕ್ಕೆ ಸಹಿ ಹಾಕಿದ್ದಾರೆ. ಅಲ್ಲಿಯವರೆಗೆ ಪ್ರತಿ ತಿಂಗಳು ಗಂಡ ಪತ್ನಿಗೆ ಒಂದಿಷ್ಟು ಹಣ, ಉಳಿಯಲು ಫ್ಲ್ಯಾಟ್ ಮತ್ತು ಕಾರನ್ನು ಕೊಡುವುದು ಎಂದು ಮಾತುಕತೆಯಾಯಿತು. ಇಬ್ಬರೂ ಪ್ರತ್ಯೇಕವಾಗಿ ಉಳಿಯಲು ಸಾಧ್ಯ ಎಂದಾದರೆ ನಂತರ ಪತಿ ಆಕೆಗೆ ಆಜೀವ ನಿರ್ವಹಣೆಗಾಗಿ 30 ಲಕ್ಷ ರೂಪಾಯಿಗಳ ಏಕಕಾಲಿಕ ಮೊತ್ತದ ಪರಿಹಾರವನ್ನು ನೀಡಬೇಕು ಎಂದು ನಿರ್ಧರಿಸಲಾಯಿತು.
ಆದರೆ ಪ್ರತ್ಯೇಕ ಇರುವಾಗಲೇ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ದಂಪತಿ ನಡುವೆ ಕಲಹ ಶುರುವಾಯಿತು. ಪತ್ನಿಯ ಮೇಲಿನ ಸಿಟ್ಟಿನಿಂದ ಪತಿ, ಒಪ್ಪಂದದಲ್ಲಿ ತಿಳಿಸಿರುವ ಹಣ ನೀಡಲು ನಿಲ್ಲಿಸಿದರು. ಇದರಿಂದ ಸಿಟ್ಟುಗೊಂಡ ಪತ್ನಿ ಕೌಟುಂಬಿಕ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ತಮ್ಮ ಪತಿ ತಮಗೆ ಮೋಸ ಮಾಡಿದ್ದಾರೆ ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ಈ ವಿವಾದ ಸದ್ಯ ಕೋರ್ಟ್ನಲ್ಲಿ ಇದ್ದು, ಕೋರ್ಟ್ ಯಾವ ರೀತಿ ತೀರ್ಪು ನೀಡುತ್ತದೆ ಕಾದು ನೋಡಬೇಕಿದೆ.