ಮುಳ್ಳೇರಿಯ: ಸಾಹಿತ್ಯಕ ಕಾರ್ಯಕ್ರಮಗಳಿಗೆ ದೇವಾಲಯಗಳ ಸಹಕಾರ ಗಮನಾರ್ಹ ಬೆಳವಣಿಗೆ. ಸ್ಥಳೀಯ ಪ್ರತಿಭೆಗಳ ಅನಾವರಣವಾಗಲು, ಸಾಧನೆಗೆ ದಾರಿ ತೋರಲು ಇಂತಹ ವೇದಿಕೆಗಳು ಅತೀ ಅಗತ್ಯ ಎಂದು ಕರ್ನಾಟಕ ಸರಕಾರದ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ಯುವ ನೆತಾರೆ ಕಾಂತಿ ಶೆಟ್ಟಿಯವರು ಹೇಳಿದರು.
ಅವರು ಬೆಳ್ಳೂರು ಶ್ರೀ ಮಹಾವಿಷ್ಣು ಕ್ಷೇತ್ರದ ದೇವರ ಪ್ರತಿಷ್ಠಾ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸಲಾದ ಕವಿಗೋಷ್ಠಿ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಮಾತ್ರವಲ್ಲದೆ ಮುಂದಿನ ದಿನಗಳಲ್ಲಿ ಜನಮಾನಸದಲ್ಲಿ ಉಳಿಯುವಂತಹ ಕಾರ್ಯಗಳು ಆರಾಧನಾಲಯಗಳಲ್ಲಿ ನಿರಂತರವಾಗಿ ನಡೆಯುವಂತಾಗಲಿ. ಕಾಸರಗೋಡಿನ ಕನ್ನಡಿಗರಿಗೆ ಒಂದಿಷ್ಟು ನೆಮ್ಮದಿಯ ಸಿಂಚನವಾಗಲಿ ಎಂದರು. ಕ್ಷೇತ್ರದ ಅಧ್ಯಕ್ಷರಾದ ಗಂಗಾಧರ ಬಲ್ಲಾಳ್ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬೆಳ್ಳೂರು ಪಂಚಾಯತಿ ಮಾಜಿ ಅಧ್ಯಕ್ಷ ಕಲ್ಲಗ ಚಂದ್ರಶೇಖರ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಾಧನೆ ಎನ್ನುವುದು ಸತತ ಪರಿಶ್ರಮದ ಫಲ.ಆದರೆ ಸತ್ಕಾರ್ಯ ಹಾಗೂ ನಿಸ್ವಾರ್ಥ ಕಾರ್ಯಗಳ ಮೂಲಕವೂ ಜೀವನದಲ್ಲಿ ಸಾಧನೆ ಮಾಡಿದವರನ್ನು ಅಭಿನಂದಿಸುವುದು ಊರಿಗೇ ಹೆಮ್ಮೆಯ ವಿಷಯ ಎಂದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅಖಿಲೇಶ್ ನಗುಮುಗಂ ಹಾಗೂ ಸದ್ಭಾವನ ಪ್ರಶಸ್ತಿ ವಿಜೇತ ಸಮಾಜ ಸೇವಕ ಪ್ರಭಾಕರ ಕಲ್ಲೂರಾಯ ಬನದಗದ್ದೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು. ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷರಾದ ಚನಿಯಪ್ಪ ನಾಯಕ್, ಡಾ.ಮೋಹನದಾಸ ರೈ, ಪೆÇ್ರೀ.ಎ.ಶ್ರೀನಾಥ್, ಹರೀಶ್ ಗೋಸಾಡ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜು ಪ್ರಾಧ್ಯಾಪಕರಾದ ರಾಧಾಕೃಷ್ಣ ಬೆಳ್ಳೂರು ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ ಕವಿಗಳು ಕವನ ವಾಚಿಸಿದರು.